ತಿರುವನಂತಪುರಂ: ಕೇರಳ ಸಚಿವಾಲಯ ಬೆಂಕಿ ಅವಘಡ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಉಸ್ತುವಾರಿ ವಹಿಸಿರುವ ಎಡಿಜಿಪಿ ಮನೋಜ್ ಅಬ್ರಹಾಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಅವಘಡ ಸಂಭವಿಸಿದ ಸಚಿವಾಲಯದ ಪ್ರೊಟೋಕಾಲ್ ವಿಭಾಗದಲ್ಲಿ ವಿಶೇಷ ದಳದ ಎಸ್ಪಿ ಅಜಿತ್ ನೇತೃತ್ವದ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಅವಘಡದ ಹಿಂದಿನ ನಿಖರ ಕಾರಣ ಹುಡುಕುವಲ್ಲಿ ನಿರತರಾಗಿದ್ದಾರೆ. ಘಟನೆಯ ಪೊಲೀಸ್ ಮಟ್ಟದ ತನಿಖೆಯ ಜೊತೆಗೆ ಉನ್ನತ ಮಟ್ಟದ ತನಿಖೆಗಾಗಿ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ವಿಶೇಷ ತನಿಖಾ ತಂಡವನ್ನು ನೇಮಿಸಿದ್ದಾರೆ.
ರಾಜ್ಯದಲ್ಲಿ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಚಿವಾಲಯ ಗುರಿಯಾಗಿಸಿಕೊಂಡು ಎನ್ಐಎ ವಿಚಾರಣೆ ನಡೆಸುತ್ತಿದ್ದು, ಇದೇ ವೇಳೆ ಏಕಾಏಕಿ ಬೆಂಕಿ ಹತ್ತಿಕೊಂಡಿರುವುದು ಮತ್ತಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲವಾದ್ರೂ, ಕಡತ, ದಾಖಲೆ ಹಾಗೂ ಕಂಪ್ಯೂಟರ್ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.
ಪ್ರತಿಭಟನೆ ನಡೆಸಿದ ವಿರೋಧ ಯುಡಿಎಫ್, ಬಿಜೆಪಿ
ಸಚಿವಾಲಯದಲ್ಲಿ ಬೆಂಕಿ ಹತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ ಪ್ರತಿ ಪಕ್ಷ ಯುಡಿಎಫ್ ಹಾಗೂ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿದವು. ಈ ವೇಳೆ ಇದಕ್ಕೆ ರಾಜ್ಯ ಸರ್ಕಾರಕ್ಕೆ ನೇರ ಹೊಣೆ ಎಂದು ಆರೋಪಿಸಿವೆ. ಇದೇ ವೇಳೆ ಪೊಲೀಸರು ಇವರನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ರಾಜ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ, ಯಾವುದೇ ಪ್ರಮುಖ ದಾಖಲಾತಿಗಳು ಬೆಂಕಿಗಾಹುತಿಯಾಗಿಲ್ಲ. ಗೆಸ್ಟ್ ಹೌಸ್ ಬುಕ್ ಮಾತ್ರ ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ.
ಯುಡಿಎಫ್, ಬಿಜೆಪಿ ಪ್ರತಿಭಟನೆ