ಉತ್ತರ ಪ್ರದೇಶ:ಪುರಾಣ ಪುಣ್ಯ ಕಥೆಗಳು, ಧರ್ಮ, ಭಕ್ತಿ, ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಯಲು ಜನರು ತುಂಬಾ ಇಷ್ಟಪಡುತ್ತಾರೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೀತಾ ಪ್ರೆಸ್‌ನ ಕಲ್ಯಾಣ ಪತ್ರಿಕೆಯು, ಹಲವಾರು ವರ್ಷಗಳಿಂದ ಜನರಿಗೆ ಈ ವಿಚಾರಗಳನ್ನು ಉಣಬಡಿಸುತ್ತದೆ. ಗೀತಾ ಪ್ರೆಸ್ ಅನ್ನು 1926ರಲ್ಲಿ ಪ್ರಾರಂಭಿಸಲಾಯಿತು. ಕಳೆದ 92 ವರ್ಷಗಳಲ್ಲಿ ಈ ಪತ್ರಿಕೆಯು 1,102 ಸಂಚಿಕೆಗಳನ್ನು ಪ್ರಕಟಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಪತ್ರಿಕೆಯ ಮುಖಪುಟದಲ್ಲಿ ದೇವತೆಗಳ ಅಪರೂಪದ ಚಿತ್ರಗಳನ್ನು ಹಾಕಲಾಗುತ್ತದೆ. ಇದು ಪತ್ರಿಕೆಯ ಬ್ರಾಂಡ್ ಮಾರ್ಕ್ ಆಗಿ ಮಾರ್ಪಟ್ಟಿದೆ. ಗೀತಾ ಪ್ರೆಸ್ ಅನ್ನು ಜಯದಾಲ್ ಗೋಯೆಂಕಾ ಮತ್ತು ಹನುಮಾನ್ ಪ್ರಸಾದ್ ಪೋದ್ದಾರ್ ಎಂಬುವವರು ಪ್ರಾರಂಭಿಸಿದರು. ಇದೀಗ ಕಲ್ಯಾಣ ಪತ್ರಿಕೆಯ ಸಂಪಾದಕರಾಗಿ ರಾಧೇಶ್ಯಾಮ್ ಖೇಮ್ಕಾ ಮತ್ತು ಟ್ರಸ್ಟ್ನ ಅಧ್ಯಕ್ಷ ಹಾಗೂ ಪ್ರಕಾಶಕರಾಗಿ ದೇವದಯಾಲ್ ಅಗರ್‌ವಾಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪತ್ರಿಕೆ ಪ್ರಕಟಣೆಯನ್ನು ಪ್ರಾರಂಭಿಸಿದಾಗ ಬ್ರಿಟಿಷ್ ಆಡಳಿತವಿತ್ತು. ಆದ್ದರಿಂದ ಆರಂಭದಲ್ಲಿ ಪತ್ರಿಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಇಂದು ಪತ್ರಿಕೆಯ ಸುಮಾರು ಎರಡು ಲಕ್ಷ ಪ್ರತಿಗಳನ್ನು ಪ್ರತಿ ತಿಂಗಳು ದೇಶದ ಮೂಲೆ ಮೂಲೆಗಳಿಗೆ ಅಂಚೆ ಮೂಲಕ ಕಳುಹಿಸಲಾಗುತ್ತಿದೆ.