ನಮ್ಮ ಗಣರಾಜ್ಯದ 71ನೇ ವರ್ಷದ ಹೊಸ್ತಿಲಿನಲ್ಲಿರುವ ನಾವು, ನಮ್ಮ ಸಂವಿಧಾನವು ಮಹಿಳೆಯರು ಮತ್ತು ಮಕ್ಕಳಿಗೆ ನೀಡಿರುವ ಪೂರ್ವಭಾವಿ ಸಾಂವಿಧಾನಿಕ ಬೆಂಬಲದ ಲಾಭವನ್ನು ನಾವು ಎಷ್ಟರ ಮಟ್ಟಿಗೆ ಪಡೆದುಕೊಂಡಿದ್ದೇವೆ ಎಂಬುದನ್ನು ಅವಲೋಕಿಸಬೇಕಿದೆ.
ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯವು ಕಾನೂನಿನ ಎದುರು ಎಲ್ಲರಿಗೂ ಸಮಾನತೆಯನ್ನು ಒದಗಿಸುತ್ತದೆ ಮತ್ತು ಕಾನೂನುಗಳ ಸಮಾನ ರಕ್ಷಣೆಯನ್ನು ನೀಡುತ್ತದೆ. ಜೊತೆಗೆ, ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ತಾರತಮ್ಯ ಮಾಡುವುದಕ್ಕೆ ಸಂವಿಧಾನ ಎಲ್ಲಿಯೂ ಅವಕಾಶ ನೀಡುವುದಿಲ್ಲ. “ಮಹಿಳೆಯರು ಮತ್ತು ಮಕ್ಕಳಿಗಾಗಿ ಯಾವುದೇ ವಿಶೇಷ ನಿಬಂಧನೆಗಳನ್ನು ಮಾಡುವುದನ್ನು ಈ ವಿಧೇಯಕವು ತಡೆಯುವುದಿಲ್ಲ” ಎಂಬ ಮಾತನ್ನು ವಿಧೇಯಕ 15 (3) ರಲ್ಲಿನ ಆದೇಶವು ಸ್ಪಷ್ಟಪಡಿಸುತ್ತದೆ. ನಮ್ಮ ಸಂವಿಧಾನದ ಚೌಕಟ್ಟುಗಳು ನಮ್ಮ ರಾಜಕೀಯದಲ್ಲಿ ಮುಖ್ಯವಾಹಿನಿಯ ಮಹಿಳೆಯರ ಜವಾಬ್ದಾರಿಯನ್ನು ಗುರುತಿಸಿವೆ ಮತ್ತು ಮಕ್ಕಳ ಆರೈಕೆ ಮತ್ತು ರಕ್ಷಣೆಯ ಮಹತ್ವವನ್ನು ಸಕಾರಾತ್ಮಕವಾಗಿ ಒಪ್ಪಿಕೊಂಡಿವೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ. ನಾವು ನಮ್ಮ ಸಂವಿಧಾನದಲ್ಲಿನ ದೃಷ್ಟಿಕೋನವನ್ನು ನಾವು ಗೌರವಿಸಿ, ಮುಂದುವರಿಸಿಕೊಂಡು ಬರುತ್ತಿದ್ದೇವೆಯೇ ಎಂಬುದು 70ನೇ ಗಣತಂತ್ರದ ಹೊಸ್ತಿನಲ್ಲಿ ನಮ್ಮನ್ನು ಕಾಡುವ ಪ್ರಶ್ನೆಯಾಗಿದೆ.
ಮಹಿಳೆಯರಿಗೆ ಸಮಾನತೆ ಮತ್ತು ಅವರ ಹಕ್ಕುಗಳು ಎಂಬ ಕಾನೂನು ಗಣರಾಜ್ಯದ ಆರಂಭಿಕ ವರ್ಷಗಳಲ್ಲಿ ಕೆಲವು ಅಡೆತಡೆಗಳೊಂದಿಗೆ ಪ್ರಾರಂಭವಾಯಿತು. ಆದರೆ 1950ರ ದಶಕದ ಮಧ್ಯಭಾಗದಲ್ಲಿ ಹಿಂದೂ ಸಂಹಿತೆಯ ಅಂಗೀಕಾರವು ಮಹಿಳೆಯರ ಜಗತ್ತಿನಲ್ಲಿ ಒಂದು ಲೋಕವನ್ನು ತೆರೆಯಿತು. ಅವರಿಗೂ ಮಾತನಾಡುವ ಸ್ವತಂತ್ರ ನೀಡಿತು. ಇದರ ಪ್ರಗತಿ ನಿಧಾನವಾಗಿತ್ತು, ಆದರೆ ಸ್ಥಿರವಾಗಿತ್ತು.
ಹೆರಿಗೆ ಪ್ರಯೋಜನ ಕಾಯ್ದೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ 1961 ರಲ್ಲಿ ಜಾರಿಗೆ ಬಂದಿತು. ಆದರೆ ಕಾನೂನುಗಳಿಂದ ಮಾತ್ರ ಸಮಾಜದಲ್ಲಿನ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಎಂದಿಗೂ ಸತ್ಯ. ಉದಾಹರಣೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಬಿ ವರದಕ್ಷಿಣೆ ಸಂಬಂಧಿತ ಮರಣವನ್ನು ಘೋರ ಅಪರಾಧವನ್ನಾಗಿ ಪರಿಗಣಿಸುತ್ತದೆ. ಹಾಗಿದ್ದರೆ ಈ ಕಾಯ್ದೆಯಿಂದ ವರದಕ್ಷಿಣೆಯಂತಹ ರಾಕ್ಷಸ ಪಿಡುಗಿನಿಂದ ಸಂಭವಿಸುವ ಸಾವು ಪೂರ್ಣವಾಗಿ ನಿರ್ಮೂಲನೆಗೊಂಡಿದೆಯಾ? ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಇಂದಿಗೂ ಪ್ರತಿ ಗಂಟೆಗೆ ಒಂದು ವರದಕ್ಷಿಣೆ ಸಂಬಂಧಿತ ಸಾವು ಸಂಭವಿಸುತ್ತದೆ. ಅಂತೆಯೇ, ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರಕ್ಕಾಗಿ ಇತ್ತೀಚಿನ ಕಾನೂನುಗಳು ನಿಜವಾಗಿಯೂ ಪರಿಣಾಮಕಾರಿಯಾಗಿವೆ ಎಂಬುದು ಕೂಡ ಪ್ರಶ್ನೆಯಾಗಿಯೇ ಉಳಿದಿದೆ.
ಮಹಿಳೆಯರ ಶೋಷಣೆ ಹೆಚ್ಚಾಗಿದ್ದ ಭಾರತೀಯ ಸಮಾಜದಲ್ಲಿ ಈ ಕಾನೂನುಗಳು ಅಗತ್ಯವಾಗಿದ್ದವು ಮತ್ತು ಜಾರಿಗೆ ಬಹಳ ಸಮಯ ತೆಗೆದುಕೊಂಡವು. ಇನ್ನೊಂದು ಒಳ್ಳೆಯ ಸುದ್ದಿ ಎಂದರೆ ಈ ಕಾನೂನುಗಳ ಅಸ್ತಿತ್ವದೊಂದಿಗೆ ಸಂವಿಧಾನವು ರೂಪಿಸಿರುವ ಕೆಲವು ಹಕ್ಕುಗಳನ್ನು ಪ್ರತಿಪಾದಿಸಲು ಮಹಿಳೆಯರಿಗೆ ಅಧಿಕಾರ ನೀಡಲಾಗಿದೆ. ಕೇಂದ್ರ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ, ಆ ಮೂಲಕ ತಳಮಟ್ಟದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ, ಸಮಾಜದಲ್ಲಿ ಅವರ ಧ್ವನಿಯನ್ನು ಹೆಚ್ಚಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ (ಡಿಪಿಎಸ್ಪಿ) ಎಲ್ಲಾ ಪುರುಷರು ಮತ್ತು ಮಹಿಳೆಯರಿಗೆ ಸಮರ್ಪಕ ಜೀವನೋಪಾಯದ ಹಕ್ಕನ್ನು ನೀಡಲಾಗಿದೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವಿದೆ ಎಂದು ರಾಜ್ಯವು ಭದ್ರಪಡಿಸಿಕೊಳ್ಳಬೇಕು ಎಂದು ಸೂಚಿಸುತ್ತದೆ. ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ ಮಹಿಳೆಯರಿಗೆ (ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು ಸೇರಿದಂತೆ) ಸ್ಥಾನಗಳನ್ನು ಕಾಯ್ದಿರಿಸಲು ಸಂವಿಧಾನವು ಅವಕಾಶ ನೀಡುತ್ತದೆ. ಆದರೆ ನಂತರ ನಡೆದಿದ್ದು ಬೇರೆಯೆ.
ನಮ್ಮಲ್ಲಿ ಅನೇಕ ಸಾರ್ವಜನಿಕ ಹೇಳಿಕೆಗಳು(ಅಧಿಕಾರದಲ್ಲಿರುವ ಉನ್ನತ ಸ್ಥಾನಗಳನ್ನು, ರಾಜಕಾರಣಿಗಳನ್ನು ಒಳಗೊಂಡಂತೆ) ಮಹಿಳೆಯರ ಜಾಗವು ಮನೆಯ ಅಡುಗೆ ಎಂಬ ಧೋರಣೆಯನ್ನು ಹೊಂದಿರುವುದನ್ನು ಸೂಚಿಸುತ್ತದೆ. ಕೆಲವು ಕಾಯ್ದಿರಿಸಿದ ಸ್ಥಾನಗಳಲ್ಲಿ ನೆಪ ಮಾತ್ರಕ್ಕೆ ಮಹಿಳೆಯರು ಕುಳಿತಿದ್ದಾರೆ. ಅಧಿಕಾರ ಚಲಾಯಿಸುವವರು ಪುರುಷರೇ ಎಂಬುದು ನೋಡಿದ ಕೂಡಲೆ ತಿಳಿಯುವ ಸಾಮಾನ್ಯ ಸಂಗತಿಯಾಗಿದೆ. ಮೀಸಲು ಸ್ಥಾನಗಳಲ್ಲಿ ಪ್ರಭಾವಿ ರಾಜಕಾರಣಿಗಳ ಪತ್ನಿಯರು ಕುಳಿತುಕೊಳ್ಳುವುದು ಇದಕ್ಕೊಂದು ಅತ್ಯುತ್ತಮ ನಿದರ್ಶನ. ಆದ್ದರಿಂದ, ನಮ್ಮ ಸಂವಿಧಾನದ ಚೌಕಟ್ಟುಗಳು ಬಯಸಿದ ಮತ್ತು ದೃಶ್ಯೀಕರಿಸಿದ ಸಬಲೀಕರಣವನ್ನು ಸಾಧಿಸಲು ಕಾನೂನುಗಳು ಮಾತ್ರ ಸಾಕಾಗುವುದಿಲ್ಲ. ನಮ್ಮಲ್ಲಿನ ಮನಸ್ಥಿತಿ ಬದಲಾವಣೆಯ ತುರ್ತು ಅಗತ್ಯವಿದೆ. ಕಾನೂನು ರೂಪಿಸಿದ ಕೂಡಲೇ ಎಲ್ಲವೂ ಬದಲಾಗುವುದಿಲ್ಲ. ಕಾನೂನು ಪಾಲನೆಯೊಂದಿಗೆ ನಾವು ಬದಲಾಗಬೇಕು.
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎಂದು ನಂಬಿಕೊಂಡು ಬಂದಿರುವ ಪ್ರಜಾತಂತ್ರ ರಾಷ್ಟ್ರ ನಮ್ಮದು. ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣೆಗೂ ಸಂವಿಧಾನದಲ್ಲಿ ಪ್ರಾರಂಭದಲ್ಲಿಯೇ ಜಾಗ ನೀಡಲಾಗಿದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 25 ನೇ ವಿಧೇಯಕವು ವಿಶೇಷ ಕಾಳಜಿ ಮತ್ತು ಸಹಾಯಕ್ಕಾಗಿ ಬಾಲ್ಯದ ಅರ್ಹತೆಯನ್ನು ಗುರುತಿಸುತ್ತದೆ. ಈ ಅರ್ಹತೆಗೆ ಅನುಗುಣವಾಗಿ, ನಮ್ಮ ಸಂವಿಧಾನವು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಯಾವುದೇ ಕಾರ್ಖಾನೆ ಅಥವಾ ಗಣಿಗಳಲ್ಲಿ ಕೆಲಸ ಮಾಡಲು ಅಥವಾ ಯಾವುದೇ ಅಪಾಯಕಾರಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಮಕ್ಕಳ ಕೋಮಲ ವಯಸ್ಸನ್ನು ಭದ್ರಪಡಿಸುವ ನಿಟ್ಟಿನಲ್ಲಿ ರಾಜ್ಯವು ತನ್ನ ನೀತಿಯನ್ನು ಕಟ್ಟುನಿಟ್ಟುಗೊಳಿಸಬೇಕು. ಈ ವಿಷಯದಲ್ಲಿ ಸಂವಿಧಾನದ ದುರುಪಯೋಗವಾಗಬಾರದು ಎಂದು ಡಿಪಿಎಸ್ಪಿ ಬಯಸುತ್ತದೆ ಮತ್ತು ಮಕ್ಕಳಿಗೆ ಆರೋಗ್ಯಕರ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸ್ವಾತಂತ್ರ್ಯ ನೀಡುತ್ತದೆ.
ಈ ನಿಟ್ಟಿನಲ್ಲಿ ಸಾಕಷ್ಟು ಅವಕಾಶಗಳು ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ. ಬಾಲಕರು ಮತ್ತು ಯುವಕರನ್ನು ಶೋಷಣೆಯಿಂದ ರಕ್ಷಿಸುವ ಹಕ್ಕನ್ನು ನೀಡಲಾಗಿದೆ. ನೈತಿಕ ಮತ್ತು ದೈಹಿಕ ಶೋಷಣೆಯಿಂದ ಕಾಪಾಡುವ ಕಾನೂನಿದೆ. ಇವು ಕಾನೂನಿನ ಪುಸ್ತಕದಲ್ಲಿರುವ ಆದರ್ಶಗಳು. ಆದರೆ ಮಕ್ಕಳ ಈ ಹಕ್ಕುಗಳನ್ನು ರಕ್ಷಿಸಲು ನಿಜವಾಗಿಯೂ ನಾವು ಏನು ಮಾಡಿದ್ದೇವೆ? ದೇಶದಲ್ಲಿ ಮಕ್ಕಳ ಸ್ಥಿತಿ ಹೇಗಿದೆ? ಬಾಲ ಕಾರ್ಮಿಕ ಪದ್ಧತಿ ನಿಜವಾಗಿಯೂ ನಿರ್ಮೂಲನೆಗೊಂಡಿದೆಯೇ ಎಂಬುದು ದೇಶ ಸ್ವತಂತ್ರ ಪಡೆದು 7 ದಶಕಗಳ ಬಳಿಕವೂ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ.