ಕರ್ನಾಟಕ

karnataka

ETV Bharat / bharat

ಕನ್ನಡದ 'ಮುದ್ದಿನ ಮಾವ'.. ಭಾರತದ ಶ್ರೇಷ್ಠ ಸಂಗೀತ ದಿಗ್ಗಜ.. ಶತಮಾನದ ಸಿರಿಕಂಠ ಎಸ್‌ಪಿಬಿ!! - S.P. Balasubramaniam

ಗಾಯಕನಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಾಧಿಸಿರೋ ಸಾಧನೆ ಯಾವ ಕವಿಯೂ ವರ್ಣಿಸಲು ಸಾಧ್ಯವಿಲ್ಲ. ಯಾವ ಕಲಾವಿದನ ಕುಂಚವೂ ಬಣ್ಣಿಸಲು ಸಾಧ್ಯವಿಲ್ಲ. ಈ ಮಾತು ಅಕ್ಷರಶಃ ನಿಜ. ಅವರು ರಾಷ್ಟ್ರ ಅಷ್ಟೇ, ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಅಪರೂಪದ ಪ್ರತಿಭೆ..

S.P. Balasubramaniam life history
ಗಾಯಕ ಎಸ್​​ಪಿಬಿ

By

Published : Sep 25, 2020, 2:56 PM IST

Updated : Sep 25, 2020, 3:08 PM IST

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.. ಅಂದ್ರೆ ಎಸ್​ಪಿಬಿ.. ಈ ಹೆಸರು ಕೇಳಿದ್ರೆ ಸಾಕು ಗಂಧರ್ವ ಲೋಕವೇ ನಮ್ಮ ಮುಂದೆ ಬಂದಂತಾಗುತ್ತೆ. ಎಸ್‍ಪಿಬಿ ಅಂದ್ರೆ ಯಾರೇ ಆಗಲಿ ಒಂದು ಕ್ಷಣ ರೋಮಾಂಚಿತರಾಗುತ್ತಾರೆ. ಅವರ ದನಿ ಕೇಳಿದ್ರೆ ನಮಗೆ ಅರಿವಿಲ್ಲದ ಯಾವುದೋ ಒಂದು ಲೋಕದಲ್ಲಿ ವಿಹರಿಸಿದ ಅನುಭವಾಗುತ್ತದೆ. ಅದೇ ಅವರ ಕಂಠಸಿರಿ..

ಬಹುಮುಖ ಪ್ರತಿಭೆಯ ಗಾನಗಾರುಡಿಗ :ಭಾರತೀಯ ಚಿತ್ರರಂಗದ ಅದೆಷ್ಟೋ ನಟರ ಅಭಿನಯದಲ್ಲಿ ತಮ್ಮ ಧ್ವನಿಯ ಮೂಲಕ ಬೆರೆತಿದ್ದ ಅಪರೂಪದ ಕಲಾವಿದ ಎಸ್​ಪಿಬಿ. ಗಾಯಕನಾಗಿ, ನಟನಾಗಿ ಮತ್ತು ಸಂಗೀತ ನಿರ್ದೇಶಕನಾಗಿ ಬಹುಭಾಷೆಯಲ್ಲಿ ಗುರುತಿಸಿಕೊಂಡ ಅವರ ಸಾಧನೆಗಳು ಅಪೂರ್ವ ಮತ್ತು ಅವರ್ಣನೀಯ.

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ, ಇದು ಎಸ್ ಪಿ ಬಾಲಸುಬ್ರಮಣ್ಯಂ ಅವರ ಪೂರ್ತಿ ಹೆಸರು. 1946 ಜೂನ್ 4ರಂದು ಆಂಧ್ರಪ್ರದೇಶದ ನೆಲ್ಲೂರಿನ ಕೊನೆಟಮ್ಮಪೇಟ ಎಂಬಲ್ಲಿ ಜನಿಸಿದ ಬಾಲು, ಹರಿಕಥಾ ವಿದ್ವಾಂಸ ಎಸ್ ಪಿ ಸಾಂಬಮೂರ್ತಿ ಹಾಗೂ ಶಕುಂತಲಮ್ಮ ದಂಪತಿಯ ಸುಪುತ್ರ. ಅವರಿಗೆ ಒಬ್ಬ ಸಹೋದರ ಹಾಗೂ ಐವರು ಸಹೋದರಿಯರಿದ್ದಾರೆ.

ಶತಮಾನದ ಅನರ್ಘ್ಯ ಗಾಯಕ ಎಸ್​​ಪಿಬಿ

ತಂದೆಯಿಂದಲೇ ಬಂದ ಸಿರಿಕಂಠದ ಬಳುವಳಿ:ಎಸ್​ಪಿಬಿ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಮೂಡಲು ಅವರ ತಂದೆ ಸಾಂಬಮೂರ್ತಿ ಅವರೇ ಕಾರಣ.. ಅಷ್ಟೇ ತಂದೆ ಸ್ಫೂರ್ತಿಯೂ ಆಗಿದ್ದರು. 1966ರಲ್ಲಿ ಅನಂತಪುರಂನಲ್ಲಿ ಎಸ್​ಪಿಬಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ತಮ್ಮ 20ನೇ ವಯಸ್ಸಿನಲ್ಲಿ ಖ್ಯಾತ ಗಾಯಕ ಘಂಟಸಾಲಾ ಹಾಗೂ ಎಸ್ ಪಿ ಕೋದಂಡಪಾಣಿ ಅವರು ತೀರ್ಪುಗಾರರಾಗಿದ್ದ ಕಾರ್ಯಕ್ರಮವೊಂದರಲ್ಲಿ ಹಾಡೊಂದನ್ನು ಹಾಡಿದ ಎಸ್​​ಪಿಬಿ, ಆ ಸ್ಪರ್ಧೆಯಲ್ಲಿ ವಿಜೇತರಾದರು. ಇದು ಅವರು ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಪದಾರ್ಪಣೆ ಮಾಡಲು ಕಾರಣವಾಯ್ತು.

ನಕ್ಕರೇ ಅದೇ ಸ್ವರ್ಗದ ಮೂಲಕ ಕನ್ನಡ ಪಯಣ :ಎಸ್​​ಪಿಬಿಗೆ ಹಾಡಲು 1966ರಲ್ಲಿ ಕೋದಂಡಪಾಣಿಯಯವರು ತಮ್ಮ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ' ಎಂಬ ತೆಲುಗು ಚಿತ್ರದಲ್ಲಿ ಅವಕಾಶ ನೀಡಿದರು. ಅದೇ ಅವರ ಸಿನಿ ಪಯಣಕ್ಕೆ ಮುನ್ನುಡಿ ಆಯ್ತು.. ಅಂದಿನಿಂದ ಬಾಲು ಹಿಂತಿರುಗಿ ನೋಡಿದ್ದೇ ಇಲ್ಲ. 1966ರಲ್ಲಿ 'ನಕ್ಕರೆ ಅದೇ ಸ್ವರ್ಗ' ಚಿತ್ರದ ಮೂಲಕ ಕನ್ನಡ ಚಿತ್ರಗಳಲ್ಲಿ ಹಾಡಲು ಆರಂಭಿಸಿದರು. ಆರಂಭದಲ್ಲಿ ಎಸ್​​ಪಿಬಿ ಅವರಿಗೆ ಕನ್ನಡ ಬರದಿದ್ದರೂ ತಾನು ಕನ್ನಡಿಗನೇ ಎಂಬಂತೆ ಲೀಲಾಜಾಲವಾಗಿ ಹಾಡುಗಳನ್ನು ಹಾಡಿ, ಕನ್ನಡಿಗರ ಮನ ಗೆದ್ದಿದ್ದರು.

1981 ಫೆಬ್ರವರಿ 8ರಂದು ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ, ಬೆಳಗ್ಗೆ 9 ರಿಂದ ರಾತ್ರಿ 9ವರೆಗೆ 21 ಹಾಡು ರೆಕಾರ್ಡ್ ಮಾಡಿದ್ದರು. ನಂತರ ಮತ್ತೊಂದು ದಿನ ತಮಿಳಿನಲ್ಲಿ 19 ಹಾಡು, ಹಿಂದಿ ಭಾಷೆಯಲ್ಲಿ ಒಂದೇ ದಿನ 16 ಹಾಡು ಹಾಡಿ, ಯಾವ ಗಾಯಕರೂ ಮಾಡದ ದಾಖಲೆ ಮಾಡಿದರು. ಆ ಸಮಯದಲ್ಲಿ ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್ ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಬಹಳ ಖ್ಯಾತರಾಗಿದ್ದರು. ಆದರೆ, ಎಸ್ ಪಿ ಬಾಲಸುಬ್ರಮಣ್ಯಂ ಎಲ್ಲಾ ಭಾಷೆಯಲ್ಲೂ ಹಾಡಿ ಸೈ ಎನಿಸಿಕೊಂಡರು.

ಎಸ್‌ಪಿಬಿ ಕಂಠಂ ಎಲ್ಲಾ ನಟರಿಗೆ ಹೊಂದಿತ್ತು :ಕರ್ನಾಟಕ ರತ್ನ ಡಾ. ರಾಜ್​ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ರೆಬಲ್ ಸ್ಟಾರ್ ಅಂಬರೀಶ್, ಅನಂತ್ ನಾಗ್, ಶ್ರೀನಾಥ್, ಎಂಜಿಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ಅಕ್ಕಿನೇನಿ ಅವರಂತ ದಿಗ್ಗಜ ನಟರಿಗೆ ಎಸ್​​​ಪಿಬಿ ಧ್ವನಿಯಾಗಿದ್ದರು. ಯಾವ ನಟನಿಗೂ ಅವರ ಧ್ವನಿ ಹೊಂದುವುದಿಲ್ಲ ಎಂಬ ಮಾತೇ ಇರಲಿಲ್ಲ.

ಗಾಯಕನಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಾಧಿಸಿರೋ ಸಾಧನೆ ಯಾವ ಕವಿಯೂ ವರ್ಣಿಸಲು ಸಾಧ್ಯವಿಲ್ಲ. ಯಾವ ಕಲಾವಿದನ ಕುಂಚವೂ ಬಣ್ಣಿಸಲು ಸಾಧ್ಯವಿಲ್ಲ. ಈ ಮಾತು ಅಕ್ಷರಶಃ ನಿಜ. ಅವರು ರಾಷ್ಟ್ರ ಅಷ್ಟೇ, ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಅಪರೂಪದ ಪ್ರತಿಭೆ.

ಹಿಂದಿಯಲ್ಲಿ 'ಏಕ್ ತುಜೆ ಕೇ ಲಿಯೇ', 'ಮೈ ನೆ ಪ್ಯಾರ್ ಕಿಯಾ' ಸೇರಿ ಅನೇಕ ಸಿನಿಮಾಗಳಲ್ಲಿ ಹಾಡಿದ ಎಸ್​​ಪಿಬಿ, 1980ರಲ್ಲಿ ಕೆ. ವಿಶ್ವನಾಥ್ ನಿರ್ದೇಶನದ 'ಶಂಕರಾಭರಣಂ' ಚಿತ್ರದಲ್ಲಿ ಹಾಡಿದ್ದ ಹಾಡುಗಳಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡರು. ಈ ಚಿತ್ರದ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಒಲಿದು ಬಂತು. ಮತ್ತೆ 1981ರಲ್ಲಿ ಹಿಂದಿಯ 'ಏಕ್ ತುಜೆ ಕೇ ಲಿಯೇ' ಚಿತ್ರದ ಹಾಡಿಗಾಗಿ ಎರಡನೇ ಬಾರಿ ರಾಷ್ಟ್ರಪ್ರಶಸ್ತಿ ದೊರೆಯಿತು.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಂಗೀತ ನಿರ್ದೇಶನದಲ್ಲಿ 1983ರಲ್ಲಿ 'ಸಾಗರ ಸಂಗಮಂ', 1986ರಲ್ಲಿ 'ಸ್ವಾತಿಮುತ್ತ್ಯಂ', 1988ರಲ್ಲಿ 'ರುದ್ರವೀರ' ಚಿತ್ರಕ್ಕೆ ಹಾಡಿದ ಹಾಡುಗಳು ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟವು. ಈ ಚಿತ್ರಗಳಿಗಾಗಿ ಇಳಯರಾಜ ಹಾಗೂ ಎಸ್​ಪಿಬಿ ಇಬ್ಬರಿಗೂ ಇನ್ನೊಮ್ಮೆ ರಾಷ್ಟ್ರಪ್ರಶಸ್ತಿ ದೊರೆಯಿತು.

ನಾಲ್ಕು ರಾಷ್ಟ್ರ ಪ್ರಶಸ್ತಿ ಎಸ್‌ಪಿಬಿ ಕೊರಳಿಗೆ :ಇಳಯರಾಜ, ಉಪೇಂದ್ರ ಕುಮಾರ್, ಎ ಆರ್ ರೆಹಮಾನ್, ವಿದ್ಯಾಸಾಗರ್, ಎಂ ಎಂ ಕೀರವಾಣಿ, ಎಸ್ ಎ ರಾಜ್​ಕುಮಾರ್, ಹಂಸಲೇಖ ಹಾಗೂ ದೇವ ಸೇರಿ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರೊಂದಿಗೆ ಅವರು ಕೆಲಸ ಮಾಡಿದ್ದಾರೆ. 1995ರಲ್ಲಿ ಹಂಸಲೇಖ ಸಂಗೀತ ನಿರ್ದೇಶನದ 'ಕನ್ನಡದ ಗಾನಯೋಗಿ ಪಂಚಾಕ್ಷರಿ ಗವಾಯಿ' ಚಿತ್ರದ ಹಾಡಿಗಾಗಿ ಅವರು 4ನೇ ರಾಷ್ಟ್ರಪ್ರಶಸ್ತಿ ಪಡೆದರು. 2013ರಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್​​ಪ್ರೆಸ್​​​' ಚಿತ್ರಕ್ಕಾಗಿ ವಿಶಾಲ್ ಶೇಖರ್ ನಿರ್ದೇಶನದಲ್ಲಿ ಹಾಡುವ ಮೂಲಕ, ಸುಮಾರು 15 ವರ್ಷಗಳ ನಂತರ ಮತ್ತೆ ಬಾಲಿವುಡ್ ಸಿನಿಮಾಗಾಗಿ ಹಾಡಿದರು.

ಖ್ಯಾತ ದಿಗ್ಗಜ ನಟರಿಗೆ ಕಂಠದಾನ : ಬಾಲು ಕೇವಲ ಗಾಯಕರಾಗಿ ಮಾತ್ರವಲ್ಲ ಡಬ್ಬಿಂಗ್ ಕಲಾವಿದರಾಗಿ, ಉತ್ತಮ ನಟರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಬಹಳಷ್ಟು ಸಿನಿಮಾಗಳಲ್ಲಿ ಕಮಲ ಹಾಸನ್, ರಜನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ.ಭಾರತಿರಾಜ, ಅನಿಲ್ ಕಪೂರ್, ಗಿರೀಶ್ ಕಾರ್ನಾಡ್, ಜೆಮಿನಿ ಗಣೇಶನ್, ಅರ್ಜುನ್ ಸರ್ಜಾ, ರಘುವರನ್ ಸೇರಿ ಅನೇಕ ನಾಯಕರಿಗೆ ಹಾಗೂ ಪೋಷಕ ಕಲಾವಿದರಿಗೆ ಧ್ವನಿ ನೀಡಿದ್ದಾರೆ. ಉತ್ತಮ ಕಂಠದಾನಕ್ಕಾಗಿ ಆಂಧ್ರಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಕೂಡ ಗಳಿಸಿದ್ದಾರೆ.

ಕನ್ನಡದ ಮುದ್ದಿನ ಮಾವ ಯಾರು ಮರೆಯುವರು?: ಕನ್ನಡದ ತಿರುಗು ಬಾಣ, ಮುದ್ದಿನ ಮಾವ, ಮಾಂಗಲ್ಯಂ ತಂತು ನಾನೇನ ಸೇರಿ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಎಸ್​​​ಪಿಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 1993ರಲ್ಲಿ ಓಂಸಾಯಿ ಪ್ರಕಾಶ್ ನಿರ್ದೇಶನದಲ್ಲಿ ತಯಾರಾದ 'ಮುದ್ದಿನ ಮಾವ' ಚಿತ್ರದಲ್ಲಿ ನಾಯಕಿ ಶ್ರುತಿ ತಂದೆಯಾಗಿ ನಟಿಸಿದ್ದಾರೆ. ಹೆಸರಿಗೆ ತಕ್ಕಂತೆ ಮುಗ್ಧ ಮಾವನಾಗಿ ಅವರು ನಟಿಸಿದ್ದಾರೆ. ಈ ಚಿತ್ರದ ಅವರ ಅಭಿನಯ ನೋಡುವವರ ಕಣ್ಣಂಚು ಒದ್ದೆ ಮಾಡುವಂತೆ ಮಾಡಿತ್ತು. ಅಂತಹ ಮುಗ್ಧ ಅಭಿನಯ ಅವರದ್ದು.

ಸಿನಿಮಾ ಮಾತ್ರವಲ್ಲ ತೆಲುಗು, ತಮಿಳು, ಕನ್ನಡ ಸೇರಿ ಅನೇಕ ಧಾರಾವಾಹಿಗಳ ಶೀರ್ಷಿಕೆ ಹಾಡುಗಳನ್ನು ಕೂಡ ಎಸ್​​ಪಿಬಿ ಹಾಡಿದ್ದಾರೆ. ಕನ್ನಡದಲ್ಲಿ ಅನ್ವೇಷಣೆ, ಎದೆ ತುಂಬಿ ಹಾಡಿದೆನು, ತೆಲುಗಿನ ಪಾಡುತಾ ತೀಯಗಾ, ಸ್ವರಾಭಿಷೇಕಂ, ತಮಿಳಿನಲ್ಲಿ ಎನ್ನೋಡು ಪಾಟು ಪಾಡಂಗಳ್ ಸೇರಿ ಅನೇಕ ಸಂಗೀತ ಕಾರ್ಯಕ್ರಮಗಳ ಸಾರಥ್ಯ ವಹಿಸಿದ್ದಾರೆ ಎಸ್ ಪಿ ಬಾಲಸುಬ್ರಮಣ್ಯಂ.

ಅಪ್ಪನ ಹಾದಿಯಲ್ಲೇ ಪುತ್ರ ಚರಣ್ :ಎಸ್​ಪಿಬಿಯವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಅವರ ಪತ್ನಿಯ ಹೆಸರು ಸಾವಿತ್ರಿ. ಈ ದಂಪತಿಗೆ ಪಲ್ಲವಿ ಹಾಗೂ ಎಸ್ ಪಿ ಚರಣ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎಸ್ ಪಿ ಚರಣ್ ಕೂಡ ಹಿನ್ನೆಲೆ ಗಾಯಕರು. ತಮಿಳು, ತೆಲುಗು, ಕನ್ನಡದಲ್ಲಿ ಕೂಡ ಚರಣ್ ಹಾಡಿದ್ದಾರೆ. 2003ರಲ್ಲಿ ಬಿಡುಗಡೆಯಾದ 'ಹುಡುಗಿಗಾಗಿ' ಚಿತ್ರದಲ್ಲಿ ಚರಣ್ ನಟಿಸಿದ್ದಾರೆ. ಚರಣ್ ಕೂಡ ಗಾಯಕರಾಗಿ, ನಟ, ನಿರೂಪಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಎಸ್​​​ಪಿಬಿ ಸಹೋದರಿ ಎಸ್ ಪಿ ಶೈಲಜಾ ಕೂಡ ಖ್ಯಾತ ಹಿನ್ನೆಲೆ ಗಾಯಕಿ.

40 ಸಾವಿರಕ್ಕೂ ಅಧಿಕ ಹಾಡು ಹಾಡಿದ ಕೋಗಿಲೆ:ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳ ಗಾಯನ, ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, ಸುಮಾರು 25 ಬಾರಿ ಆಂಧ್ರಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್, ನಟ, ಕಂಠದಾನ ಕಲಾವಿದ, ನಿರ್ಮಾಪಕ ಹೀಗೆ ಎಸ್ ಬಿ ಬಾಲಸ್ರುಬ್ರಮಣ್ಯಂ ಮಾಡಿರುವ ಸಾಧನೆಗಳಿಗೆ ಲಭಿಸಿರುವ ಗೌರವಗಳು ಅನೇಕ.

Last Updated : Sep 25, 2020, 3:08 PM IST

ABOUT THE AUTHOR

...view details