ಕೇರಳ: ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ್ದು, ಮುಂಗಾರು ಮಳೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಾನ್ಸೂನ್ ಅಪ್ಪಳಿಸಿರುವ ಪರಿಣಾಮ ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ 'ಯಲ್ಲೋ ಅಲರ್ಟ್' ಘೋಷಿಸಿದೆ. ತಿರುವನಂತಪುರಂ, ಅಲಪ್ಪುಝಾ, ಕೊಲ್ಲಂ, ಪಠಾನ್ಮತ್ತಿಟ್ಟಾ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಲ್ಲಿ 'ಯಲ್ಲೋ ಅಲರ್ಟ್' ಘೋಷಣೆ ಮಾಡಿದೆ.
ರಾಜ್ಯದಲ್ಲೂ ವರ್ಷಧಾರೆ!
ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲೂ ಮಳೆಗಾಲ ಆರಂಭವಾಗುವುದು ವಾಡಿಕೆ. ಈಗಾಗಲೇ ರಾಜ್ಯದ ಕೆಲವು ಪ್ರದೇಶಗಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲೂ ಮಳೆಯ ಅಬ್ಬರ ಆರಂಭವಾಗಲಿದೆ. ಮುಂಗಾರು ಪೂರ್ವ ಮಳೆ ಉತ್ತಮ ರೀತಿಯಲ್ಲಿ ಸುರಿದಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ಭೀತಿಯ ನಡುವೆಯೇ ರೈತರು ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಮುಂಗಾರು ಮಳೆ ಆರ್ಭಟಕ್ಕೆ ರಾಜ್ಯ ತತ್ತರಿಸಿ ಹೋಗಿತ್ತು. ಅದರಲ್ಲೂ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಮುಂಗಾರು ಮಳೆಯ ಆರ್ಭಟದಿಂದಾಗಿ ಭಾರಿ ಹಾನಿಯಾಗಿತ್ತು. ಉತ್ತರ ಕರ್ನಾಟಕದಲ್ಲೂ ಮಹಾ ಪ್ರವಾಹ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಹೀಗಾಗಿ ಈ ವರ್ಷ ಮಾನ್ಸೂನ್ ಅಬ್ಬರ ಹೇಗಿರಲಿದೆ ಎಂಬ ಕುತೂಹಲದ ಜೊತೆಗೆ ಆತಂಕವೂ ಮನೆ ಮಾಡಿದೆ.