ನವದೆಹಲಿ:ಲಾಕ್‌ಡೌನ್ ಸಮಯದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ರಿಯಲ್ ಲೈಫ್ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್, ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ.
ಕಿರ್ಗಿಸ್ತಾನದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಚಾರ್ಟೆಡ್ ಫ್ಲೈಟ್ ವ್ಯವಸ್ಥೆ ಮಾಡಿದ್ದರು. ಕೆಟ್ಟ ಹವಾಮಾನದಿಂದಾಗಿ ಕಿರ್ಗಿಸ್ತಾನ್‌ನಿಂದ ವಾರಣಾಸಿಗೆ ಹಾರಾಟ ಮಾಡಬೇಕಿದ್ದ ವಿಮಾನದ ಸಮಯವನ್ನು ಮುಂದೂಡಲಾಗಿದೆ. ಸೋನು ಸೂದ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ವಿಮಾನವು ನಾಳೆ ಹೊರಡಲು ಸಿದ್ಧವಾಗಿದೆ. ವಿಮಾನ ಸಂಸ್ಥೆಯವರು ಹಾರಾಟದ ಸಮಯ ತಿಳಿಸಲಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಆತಂಕಕ್ಕೊಳಗಾದ ವಿದ್ಯಾರ್ಥಿಗಳಿಗೆ ವಿಮಾನವನ್ನು ಒಂದು ದಿನ ಮಾತ್ರ ಮುಂದೂಡಲಾಗುತ್ತಿದೆ. ಈ ವಿಮಾನ ಗುರುವಾರ ಹೊರಡಲಿದೆ. ವಿಮಾನ ಸಂಸ್ಥೆಯವರು ಹಾರಾಟದ ಸಮಯ ನಿಶ್ಚಯಿಸಲಿದ್ದಾರೆ. ಇಲ್ಲಿಯವರೆಗೆ ನೋಂದಾಯಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಶೀಘ್ರದಲ್ಲೇ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಟ್ವಿಟ್ಟರ್ನಲ್ಲಿ ವಿನಂತಿ ಮಾಡಿದ್ದಾರೆ.
ಕಿರ್ಗಿಸ್ತಾನ್‌ದಲ್ಲಿ ಸಿಲುಕಿರುವ ಸುಮಾರು 3000 ವಿದ್ಯಾರ್ಥಿಗಳನ್ನು ಭಾರತಕ್ಕೆ ಮರಳಿ ಕರೆತರಲು ನೆರವಾಗುವುದಾಗಿ ಸೋನು ಸೂದ್ ಮಂಗಳವಾರ ಪ್ರಕಟಿಸಿದರು. ಮೊದಲ ವಿಮಾನವು ಬಿಶೆಕ್ನಿಂದ ವಾರಣಾಸಿ ನಗರಕ್ಕೆ ಬುಧವಾರ ಹೊರಡಲಿದೆ ಎಂದು ಪೋಸ್ಟ್ ಮಾಡಿದ್ದರು. ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ವಿಮಾನಗಳನ್ನು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಿದ್ದರು.