ನವದೆಹಲಿ:ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವು 'ಸಂವೇದನ ರಹಿತ'ವಾಗಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಕಳೆದ 10 ದಿನಗಳಿಂದ ಇಂಧನ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದು, ಇದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ. ಮಾರ್ಚ್ ತಿಂಗಳ ಆರಂಭದಿಂದಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವೇಳೆಯಲ್ಲಿ ಜನರ ಸಮಸ್ಯೆಗಳನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆಯೇ ಹೊರತು ಅವರನ್ನು ಮತ್ತಷ್ಟು ಸಂಕಷ್ಟಗಳಿಗೆ ದೂಡುವುದಲ್ಲ. ಹೀಗಾಗಿ ತೈಲ ಬೆಲೆ ಏರಿಕೆಯ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನರು 'ಸ್ವಾವಲಂಬಿಗಳಾಗಿರಬೇಕು' ಎಂದು ನೀವು ಬಯಸುವುದಾದರೆ, ಅವರ ಸಾಮರ್ಥ್ಯದ ಮೇಲೆ ಹಣಕಾಸಿನ ಒತ್ತಡ ಹೇರಬೇಡಿ. ಬಡಜನರು ತೀವ್ರ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಸರ್ಕಾರ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ಅಗತ್ಯವಿರುವವರ ಕೈಗೆ ಹಣವನ್ನು ನೇರವಾಗಿ ನೀಡಬೇಕು ಎಂದು ಕೈ ನಾಯಕಿ ಆಗ್ರಹಿಸಿದ್ದಾರೆ. ಅಲ್ಲದೇ ಅಬಕಾರಿ ಸುಂಕ ಮತ್ತು ಇಂಧನ ಬೆಲೆ ಏರಿಕೆ ಮೂಲಕ ಸರ್ಕಾರವು ಸುಮಾರು 2.6 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
82 ದಿನಗಳ ಲಾಕ್ಡೌನ್ ಬಳಿಕ ಸತತ 10 ದಿನಗಳಿಂದ ತೈಲ ಕಂಪನಿಗಳು ಇಂಧನ ಬೆಲೆ ಏರಿಸುತ್ತಿದ್ದು, ಇದೀಗ ಲೀಟರ್ ಪೆಟ್ರೋಲ್ ಮೇಲೆ ಒಟ್ಟು 5.47 ರೂ. ಹಾಗೂ ಡೀಸೆಲ್ ಮೇಲೆ 5.8 ರೂ. ಹೆಚ್ಚಳವಾಗಿದೆ. ಇಂಧನ ಬೆಲೆ ಏರಿಕೆ ಪ್ರತಿಯೊಂದು ಕ್ಷೇತ್ರದ ಮೇಲೂ ಪ್ರಭಾವ ಬೀರುವುದರಿಂದ ಕೃಷಿ, ಆಹಾರ ಉತ್ಪನ್ನಗಳು ಸೇರಿದಂತೆ ವಿವಿಧ ಸರಕುಗಳ ಬೆಲೆಯಲ್ಲೂ ಏರಿಕೆಯಾಗಲಿದೆ.