ಕರ್ನಾಟಕ

karnataka

ETV Bharat / bharat

ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿಕೆ, ಮುಂದಿನ ಆರು ತಿಂಗಳಲ್ಲಿ ಹೊಸ ಸಾರಥಿ ನೇಮಕ - ಗುಲಾಂ ನಬಿ ಆಜಾದ್​​

ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದ್ದು, ಮುಂದಿನ ಕೆಲ ತಿಂಗಳವರೆಗೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಯುವ ನಿರ್ಧಾರ ಕೈಗೊಳ್ಳಲಾಗಿದೆ.

Sonia Gandhi
Sonia Gandhi

By

Published : Aug 24, 2020, 6:55 PM IST

ನವದೆಹಲಿ: ಕಾಂಗ್ರೆಸ್​ ಪಕ್ಷದಲ್ಲಿ ಉಂಟಾಗಿರುವ ನಾಯಕತ್ವದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇಂದು ಮಹತ್ವದ ಕಾರ್ಯಕಾರಿ ಸಭೆ ನಡೆಸಲಾಯಿತು. ಆರೋಪ-ಪ್ರತ್ಯಾರೋಪಗಳ ಮಧ್ಯೆ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಮುಂದುವರಿಕೆಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.

ಬರೋಬ್ಬರಿ 7 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಮುಂದುವರೆಯಲಿದ್ದು, ಮುಂದಿನ ಆರು ತಿಂಗಳೊಳಗೆ ಹೊಸ ಅಧ್ಯಕ್ಷರ ಆಯ್ಕೆ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ ಕಪಿಲ್​ ಸಿಬಲ್ ಮಾಡಿದ್ದ ಟ್ವೀಟ್​​​ ​ಡಿಲೀಟ್​!

ಪಕ್ಷದಲ್ಲಿನ ಪ್ರತಿನಿತ್ಯದ ಬೆಳವಣಿಗೆ ಕುರಿತು ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಮಾಹಿತಿ ನೀಡಲಿದೆ ,ಇದರ ಜತೆಗೆ ಪಕ್ಷದ ಹಿರಿಯರಾಗಿರುವ ಡಾ. ಮನಮೋಹನ್​ ಸಿಂಗ್​​, ಎ.ಕೆ ಆ್ಯಂಟನಿ ಕೂಡ ಸೋನಿಯಾ ಗಾಂಧಿಯವರಿಗೆ ಪಕ್ಷದ ಅಧ್ಯಕ್ಷೆಯಾಗಿ ಮುಂದುವರಿಯುವಂತೆ ಸಲಹೆ ನೀಡಿದ್ದಾರೆ.

ಕೆ.ಹೆಚ್​ ಮುನಿಯಪ್ಪ ಮಾಹಿತಿ

ಸೋನಿಯಾ ಗಾಂಧಿ ಮುಂದುವರಿಕೆ: ಕೆ.ಹೆಚ್​ ಮುನಿಯಪ್ಪ

ಇದೇ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸದಸ್ಯ ಕೆಹೆಚ್​ ಮುನಿಯಪ್ಪ, ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದು, ಆದಷ್ಟು ಬೇಗ ಚುನಾವಣೆ ನಡೆಸಿ ಹೊಸ ಸಾರಥಿ ಆಯ್ಕೆ ಮಾಡಲಾಗುವುದು ಎಂದಿದ್ದಾರೆ. ನಾಯಕತ್ವದ ಬಗ್ಗೆ ಯಾವುದೇ ರೀತಿಯ ಭಿನ್ನ ಅಭಿಪ್ರಾಯಗಳಿಲ್ಲ. ಗುಲಾಂ ನಬಿ ಆಜಾದ್​, ಮುಖಲ್​ ವಾಸ್ನಿಕ್​ ಹಾಗೂ ಆನಂದ್​ ಶರ್ಮಾ ತಮ್ಮ ಮಾಹಿತಿ ಪತ್ರದ ಮೂಲಕ ರವಾನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹೊಸ ಅಧ್ಯಕ್ಷರ ನೇಮಕಕ್ಕೆ ಸೋನಿಯಾ ಪಟ್ಟು

ಪಕ್ಷದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಭೆ ಆರಂಭಗೊಳ್ಳುತ್ತಿದ್ದಂತೆ ಸೋನಿಯಾ ಗಾಂಧಿ ತಾವು ಮಧ್ಯಂತರ ಅಧ್ಯಕ್ಷೆ ಹುದ್ದೆ ತೊರೆಯುವುದಾಗಿ ಹೇಳಿದ್ದರು. ಜತೆಗೆ ಹೊಸ ಸಾರಥಿ ನೇಮಕ ಮಾಡುವಂತೆ ಅವರು ಮನವಿ ಮಾಡಿದ್ದರು.

ಅಧ್ಯಕ್ಷರಾಗಿ ಮುಂದುವರಿಯುವಂತೆ ಮನವಿ

ಇಂದು ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಗುಲಾಂ ನಬಿ ಆಜಾದ್, ಚಿದಂಬರಂ, ಕಪಿಲ್​ ಸಿಬಲ್​, ಎಕೆ ಆ್ಯಂಟನಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ವೇಳೆ ರಾಹುಲ್​ ಗಾಂಧಿ ಹಿರಿಯ ಮುಖಂಡರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಆ ರೀತಿಯಾಗಿ ರಾಹುಲ್​ ಗಾಂಧಿ ನಡೆದುಕೊಂಡಿಲ್ಲ ಎಂದು ಗುಲಾಂ ನಬಿ ಆಜಾದ್​ ಸ್ಪಷ್ಟನೆ ನೀಡಿದ್ದರು.

ಕಳೆದ ಕೆಲ ದಿನಗಳ ಹಿಂದೆ 23 ಕಾಂಗ್ರೆಸ್​ ಮುಖಂಡರು ಪಕ್ಷದಲ್ಲಿ ಬಲಿಷ್ಠ ನಾಯಕತ್ವಕ್ಕಾಗಿ ಬೆಂಬಲಿಸಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಇದೇ ವಿಚಾರವಾಗಿ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು.

ABOUT THE AUTHOR

...view details