ನವದೆಹಲಿ: ಸೆಪ್ಟೆಂಬರ್ 14ರಿಂದ ಮಳೆಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೆ ಗೈರು ಹಾಜರಾಗಲಿದ್ದಾರೆ.
ಆರೋಗ್ಯ ತಪಾಸಣೆಗೆ ವಿದೇಶಕ್ಕೆ... ಸಂಸತ್ ಅಧಿವೇಶನಕ್ಕೆ ಸೋನಿಯಾ, ರಾಹುಲ್ ಗೈರು! - ಸಂಸತ್ ಅಧಿವೇಶನ
ಆರೋಗ್ಯ ತಪಾಸಣೆಗೋಸ್ಕರ ಸೋನಿಯಾ ಗಾಂಧಿ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದು, ಹೀಗಾಗಿ ಇದೇ ತಿಂಗಳಿಂದ ಆರಂಭಗೊಳ್ಳಲಿರುವ ಸಂಸತ್ ಅಧಿವೇಶನದಲ್ಲಿ ಅವರು ಗೈರು ಹಾಜರಾಗಲಿದ್ದಾರೆ.
ಆರೋಗ್ಯ ತಪಾಸಣೆಗಾಗಿ ಸೋನಿಯಾ ಗಾಂಧಿ(73) ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವ ಕಾರಣ ಅವರೊಂದಿಗೆ ಪುತ್ರ ರಾಹುಲ್ ಗಾಂಧಿ ಕೂಡ ತೆರಳಲಿದ್ದಾರೆ. ಹೀಗಾಗಿ ಅಧಿವೇಶನದಲ್ಲಿ ಗೈರು ಹಾಜರಾಗಲಿದ್ದಾರೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲ್ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ರಣದೀಪ್ ಸುರ್ಜೇವಾಲ್, ಆರೋಗ್ಯ ತಪಾಸಣೆಗಾಗಿ ಸೋನಿಯಾ ಗಾಂಧಿ ಇಂದು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು, ಅವರಿಗೆ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ. ಅವರಿಗೆ ಶುಭಾಶಯ ತಿಳಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತಿರುವೆ ಎಂದಿದ್ದಾರೆ.
ಇಂದು ಬೆಳಗ್ಗೆ ಕಾಂಗ್ರೆಸ್ ವರ್ಚುವಲ್ ಸಭೆ ನಡೆಸಿತು. ಅಧಿವೇಶನದಲ್ಲಿ ಕಾಂಗ್ರೆಸ್ ರೂಪರೇಷ ಹಾಗೂ ಹೋರಾಟದ ಬಗ್ಗೆ ಈ ವೇಳೆ ಮಹತ್ವದ ಚರ್ಚೆ ನಡೆಸಲಾಗಿದೆ. ಇದರಲ್ಲಿ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.