ನವದೆಹಲಿ:ಲಾಕ್ಡೌನ್ ನಡುವೆಯೂ ಕೋವಿಡ್ 19 ವಿರುದ್ಧ ಹೋರಾಡಲು ರಾಷ್ಟ್ರೀಯ ಕಾಂಗ್ರೆಸ್, ಸಮಿತಿಯೊಂದನ್ನು ರಚಿಸಿದೆ.
ಕೊರೊನಾ ಸಂಬಂಧಿತ ವಿಷಯಗಳ ಕುರಿತು ಪಕ್ಷದ ಅಭಿಪ್ರಾಯಗಳನ್ನು ರೂಪಿಸುವ ಸಲುವಾಗಿ, ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದಲ್ಲಿ 11 ಸದಸ್ಯರೊಳಗೊಂಡ ಸಮಿತಿಯನ್ನು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿದ್ದಾರೆ.
11 ಸದಸ್ಯರ ಈ ಸಮಿತಿಯಲ್ಲಿ ಡಾ.ಮನಮೋಹನ್ ಸಿಂಗ್ ಸಮಿತಿಯ ಅಧ್ಯಕ್ಷರಾಗಿದ್ದು, ಇತರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪಿ.ಚಿದಂಬರಂ, ಕೆ.ಸಿ. ವೇಣುಗೋಪಾಲ್, ಮನೀಶ್ ತಿವಾರಿ, ಜೈರಾಮ್ ರಮೇಶ್, ರಂದೀಪ್ ಸಿಂಗ್ ಸುರ್ಜೇವಾಲಾ, ಪ್ರವೀಣ್ ಚಕ್ರವರ್ತಿ, ಗೌರವ್ ವಲ್ಲಭ್, ಸುಪ್ರಿಯಾ ಶ್ರೀನಾಟೆ ಮತ್ತು ರೋಹನ್ ಗುಪ್ತಾ ಸದಸ್ಯರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೋವಿಡ್ 19 ಬಿಕ್ಕಟ್ಟು ಸಂಬಂಧಿತ ವಿಷಯಗಳ ಕುರಿತು ಸಮಿತಿಯು ನಿತ್ಯ ಪಕ್ಷದ ಅಭಿಪ್ರಾಯಗಳನ್ನು ರೂಪಿಸಲು ಸಭೆಗಳನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ.
ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 957 ಕೋವಿಡ್ 19 ಪ್ರಕರಣಗಳು, 36 ಸಾವು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 14,792ಕ್ಕೆ, ಸಾವಿನ ಸಂಖ್ಯೆ 488ಕ್ಕೆ ಏರಿಕೆಯಾಗಿದೆ.