ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಗೆ ಬರುವ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಆದಂಪುರ ಕ್ಷೇತ್ರದಿಂದ ಟಿಕ್ ಟಾಕ್ ನಟಿ ಸೋನಾಲಿ ಕಣಕ್ಕಿಳಿದಿದ್ದಾರೆ. ತನ್ನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು ಎಂದು ಹೇಳಿಕೆ ನೀಡಿದ್ದರು. ಇದೀಗ ಅದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.
'ಭಾರತ್ ಮಾತಾ ಕೀ ಜೈ' ಎನ್ನದವರು ಪಾಕಿಸ್ತಾನಿಗಳು... ಕ್ಷಮೆ ಕೇಳಿದ ಟಿಕ್ ಟಾಕ್ ಸ್ಟಾರ್! - ಸೋನಾಲಿ ಪೋಗಟ್
ಹರಿಯಾಣ ವಿಧಾನಸಭಾ ಚುನಾವಣೆ ಕಣಕ್ಕಿಳಿದಿರುವ ಟಿಕ್ ಟಾಕ್ ನಟಿ ಸೋನಾಲಿ ಪೋಗಟ್ ವಿವಾದಿತ ಹೇಳಿಕೆ ನೀಡಿದ್ದು, ಅದು ಭಾರೀ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ಕ್ಷಮೆ ಕೇಳಿದ್ದಾರೆ.

ಕಳೆದ ಮಂಗಳವಾರ ಆದಂಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಕೂಗಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಸೋನಾಲಿ ಪೋಗಟ್ ಉತ್ತೇಜಿಸಿದರು. ಈ ವೇಳೆ ಕೆಲವರು ಜೋರಾಗಿ ಘೋಷಣೆ ಕೂಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಪಾಕಿಸ್ತಾನದವರಾ? ಭಾರತದ ನಿವಾಸಿಗಳಾಗಿದ್ದರೆ ಭಾರತ್ ಮಾತಾ ಕೀ ಜೈ ಅಂತಾ ಘೋಷಣೆ ಕೂಗಿ ಎಂದು ಹೇಳಿದ್ದರು.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚನೆ ಮಾಡಿರುವ ಪೋಗಟ್, ನಾನು ಹೇಳಿರುವ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ನಾನು ಯಾವುದೇ ಕೆಟ್ಟ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ ಎಂದಿದ್ದಾರೆ.