ಅನಂತಪುರ(ಆಂಧ್ರಪ್ರದೇಶ): ಪ್ರೀತಿಯನ್ನು ಒಪ್ಪದ ಕಾರಣ ಯುವಕನೊಬ್ಬ ತನ್ನ ತಂದೆ ತಾಯಿಯನ್ನೇ ಬರ್ಬರವಾಗಿ ಕೊಂದಿರುವ ಘಟನೆ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಮುತ್ತು ಕೊಟ್ಟವಳಿಗಾಗಿ ತುತ್ತು ಕೊಟ್ಟ ಅಪ್ಪ, ಅಮ್ಮನನ್ನೇ ಕಲ್ಲಿನಲ್ಲಿ ಜಜ್ಜಿ ಕೊಂದ ಪಾಪಿ ಮಗ! ಬಸವರಾಜು ಮತ್ತು ಲಕ್ಷ್ಮಿ ಕೊಲೆಯಾದ ದಂಪತಿ. ಅವರ ಪುತ್ರ ಅಶೋಕ್ ಕೊಲೆ ಮಾಡಿದಾತ. ಅವನೊಂದಿಗೆ ಮತ್ತೊಬ್ಬನೂ ಕೊಲೆಯಲ್ಲಿ ಭಾಗಿಯಾಗಿದ್ದ. ಕಳೆದ ವರ್ಷ ನವೆಂಬರ್ 28ರಂದು ಅನಂತಪುರ ಜಿಲ್ಲೆಯ ರಾಯದುರ್ಗಂ ನ ಡಿ ಹಿರೇಹಾಳ್ ಮಂಡಲ್ನಲ್ಲಿ ಘಟನೆ ನಡೆದಿದೆ.
ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರವನ್ನು ಮನೆಯಲ್ಲಿ ತಿಳಿಸಿ ಅಪ್ಪ ಅಮ್ಮನನ್ನು ಒಪ್ಪಿಸಲು ಯತ್ನಿಸಿದ್ದ. ಆದರೆ, ಪೋಷಕರು ಒಪ್ಪಿರಲಿಲ್ಲ. ಈ ವಿಚಾರವಾಗಿ ನಿರಂತರ ಗಲಾಟೆಗಳು ನಡೆಯುತ್ತಲೇ ಇದ್ದವು. ಕೊನೆಗೊಮ್ಮೆ ಇದೇ ವಿಚಾರವಾಗಿ ಪೋಷಕರನ್ನು ರಾಡ್ ಮತ್ತು ಕಲ್ಲುಗಳಿಂದ ಜಜ್ಜಿ ಕೊಂದಿದ್ದಾನೆ.
ತಾನು ಮಾಡಿದ ಕೊಲೆಯನ್ನು ಅಶೋಕ್ ತನ್ನ ಚಿಕ್ಕಪ್ಪನ ತಲೆಗೆ ಕಟ್ಟಿದ್ದ. ಆಸ್ತಿಗಾಗಿ ಚಿಕ್ಕಪ್ಪನೇ ತನ್ನ ತಂದೆ ತಾಯಿಯನ್ನು ಕೊಂದಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದ. ಈ ಹಿನ್ನಲೆ ಕೊಲೆ ಮಾಡಿದ ಯಾವುದೇ ಪುರಾವೆ ಸಿಗದಂತೆ ಸಾಕ್ಷ್ಯ ನಾಶ ಮಾಡಿದ್ದ. ಆದರೆ, ಅಶೋಕನ ಹೇಳಿಕೆ ನಡವಳಿಕೆಗಳಿಂದ ಅನುಮಾನಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಅಶೋಕ್ ಹಾಗೂ ಅವನೊಂದಿಗೆ ಕೊಲೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.