ನವದೆಹಲಿ: ದೆಹಲಿಯಲ್ಲಿ ಕೆಲವರು ನನಗೆ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಸಲು ಬಯಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮೇಲೆ ಟೀಕಾಪ್ರಹಾರ ನಡೆಸಿ, 'ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ. ಪ್ರಧಾನ ಮಂತ್ರಿಯ ವಿರುದ್ಧ ಎದ್ದು ನಿಂತವರನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಒಂದು ವೇಳೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಮೋದಿ ಆಡಳಿತದ ವಿರುದ್ಧ ಧ್ವನಿ ಎತ್ತಿದರೆ ಅವರನ್ನೂ ಭಯೋತ್ಪಾದಕ ಎಂದು ಕರೆಯಲಾಗುತ್ತೆ' ಎಂದು ಹೇಳಿಕೆ ನೀಡಿದ್ದರು.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಆರೋಗ್ಯ ವಿಮೆಯ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ದೆಹಲಿಯಲ್ಲಿ ಯಾವಾಗಲೂ ನನ್ನನ್ನು ಕೆಣಕುವ ಮತ್ತು ಅವಮಾನಿಸುವ ಜನರಿದ್ದಾರೆ. ಅವರು ನನಗೆ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಸಲು ಬಯಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಡಿಡಿಸಿ (ಜಿಲ್ಲಾ ಅಭಿವೃದ್ಧಿ ಮಂಡಳಿ) ಚುನಾವಣೆಗಳನ್ನು ಪ್ರಜಾಪ್ರಭುತ್ವದ ಉದಾಹರಣೆಯಾಗಿ ತೋರಿಸಬೇಕೆಂದು ನಾನು ಬಯಸುತ್ತೇನೆ ಎಂದು ತಿರುಗೇಟು ನೀಡಿದರು.