ಚಂಡೀಗಢ :ಲಡಾಖ್ನಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದ ಯೋಧ ಲ್ಯಾನ್ಸ್ ನಾಯಕ್ ಸಲೀಮ್ ಖಾನ್ ಅಂತ್ಯಕ್ರಿಯೆ ಅವರ ಸ್ವಗ್ರಾಮ ಪಂಜಾಬ್‌ನ ಪಟಿಯಾಲ ಜಿಲ್ಲೆಯ ಮರ್ದಾಹೇರಿ ಗ್ರಾಮದಲ್ಲಿ ಸೇನಾ ಗೌರದೊಂದಿಗೆ ನಡೆಸಲಾಯಿತು.
ಪಶ್ಚಿಮ ಬಂಗಾಳದ ಸೇನಾ ಇಂಜಿನಿಯರ್ ಸಮೂಹದೊಂದಿಗೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಖಾನ್, ಜೂನ್ 25 ರಂದು ಲಡಾಖ್ ಸೆಕ್ಟರ್‌ನ ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ (ಎಲ್ಎಸಿ)ನ ನದಿಯ ಸಮೀಪ ಗಸ್ತು ತಿರುಗುತ್ತಿದ್ದಾಗ ಗಾಯಗೊಂಡಿದ್ದರು ಎಂದು ಸರ್ಕಾರ ಹೇಳಿದೆ. ಮೃತ ಯೋಧನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲಡಾಖ್‌ನಲ್ಲಿನ ಲ್ಯಾನ್ಸ್ ನಾಯಕ್ ಸಲೀಮ್ ಖಾನ್ ಅವರು ಗಾಯಗೊಂಡು ನಿಧನ ಹೊಂದಿದ ಸುದ್ದಿ ತಿಳಿದು ಬೇಸರವಾಗಿದೆ. ಅವರು ಪಟಿಯಾಲ ಜಿಲ್ಲೆಯ ಮರ್ದಾಹೇರಿ ಗ್ರಾಮದವರು. ಅವರ ಕುಟುಂಬಕ್ಕೆ ಸಮಾಧಾನ ಹೇಳಲು ಬಯಸುತ್ತೇನೆ. ರಾಷ್ಟ್ರವು ಧೈರ್ಯಶಾಲಿ ಸೈನಿಕನಿಗೆ ನಮಸ್ಕರಿಸುತ್ತದೆ. ಜೈ ಹಿಂದ್! ಎಂದು ಬರೆದುಕೊಂಡಿದ್ದಾರೆ.
ಯೋಧ ಸಲೀಮ್ ಖಾನ್ ಪಾರ್ಥೀವ ಶರೀರಕ್ಕೆ ತ್ರಿವರ್ಣ ಧ್ವಜ ಸುತ್ತಿ, ಸೇನಾ ಗೌರವದೊಂದಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಸಲೀಮ್ ಖಾನ್ ಪಾರ್ಥೀವ ಶರೀರ ಸ್ವಗ್ರಾಮ ತಲುಪುತ್ತಿದ್ದಂತೆ ಅಲ್ಲಿ ಸೇರಿದ್ದ ಜನ ಸಲೀಮ್ ಖಾನ್ ಅಮರ್ ರಹೇ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗಿ ಯೋಧನ ತ್ಯಾಗವನ್ನು ಸ್ಮರಿಸಿಕೊಂಡರು.
ಯೋಧ ಸಲೀಮ್ ಖಾನ್ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಖಾನ್ ಫೆಬ್ರವರಿ 2014 ರಲ್ಲಿ ಸೈನ್ಯಕ್ಕೆ ಸೇರಿದ್ದರು. ಅವರ ತಂದೆ ಮಂಗಲ್ ದೀನ್ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ 18 ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಯೋಧನ ಅಂತ್ಯಕ್ರಿಯೆಯಲ್ಲಿ ಪಂಜಾಬ್ ಸಚಿವ ಸಾಧು ಸಿಂಗ್ ಧರ್ಮಶೋಟ್, ಸೇನೆಯ ಹಿರಿಯ ಅಧಿಕಾರಿಗಳು, ಪೊಲೀಸರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.