ಹೈದರಾಬಾದ್: ನಾವು ಮನುಷ್ಯರೆಲ್ಲ ಸಾಮಾಜಿಕ ಜೀವಿಗಳು. ನಾವು ಮನುಷ್ಯರ ಸಂಪರ್ಕಕ್ಕೆ ಹಂಬಲಿಸುತ್ತೇವೆ, ಅದು ನಮ್ಮ ಸ್ವಭಾವದಲ್ಲಿಯೇ ಇದೆ. ಅನಾದಿ ಕಾಲದಿಂದಲೂ ಚಿಕ್ಕದಿರಲಿ ದೊಡ್ಡದಿರಲಿ, ಮನುಷ್ಯ ಸದಾ ಬದುಕಿದ್ದೇ ಗುಂಪುಗಳಲ್ಲಿ. ಆದರೆ, ಕಾಲ ಬದಲಾಯಿತು. ಈಗ ನಾವು ಅದೆಂತಹ ಸಮಯದಲ್ಲಿ ಬದುಕುತ್ತಿದ್ದೇವೆಂದರೆ, ನಾವು ಉಳಿದುಕೊಂಡು ಬರಲು ಹಾಗೂ ವಿಕಾಸವಾಗಲು ಯಾವ ಮಾನವ ಸಂಸರ್ಗ ಆದಿಮಾನವನಿಗೆ ನೆರವಾಗಿತ್ತೋ, ಇವತ್ತು ಅದೇ ಮಾನವರ ಸಂಸರ್ಗ ನಮ್ಮನ್ನು ಭೀಕರ ಅಂತ್ಯದತ್ತ ಕೊಂಡೊಯ್ಯುತ್ತಿದೆ.
ನವ ಕೊರೊನಾ ವೈರಸ್ ನಮ್ಮೆಲ್ಲ ವಾಸ್ತವಗಳನ್ನು ಬದಲಿಸಿಬಿಟ್ಟಿದೆ. ಮಾನವನ ಹೆಮ್ಮೆಯನ್ನು ಹೊಸಗಿ ಹಾಕಿರುವ ಪ್ರಕೃತಿ ನಿಯಂತ್ರಣ ತನ್ನ ಕೈಲಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಒಂದು ವೇಳೆ ಪ್ರಕೃತಿಮಾತೆ ಬಯಸಿದಲ್ಲಿ, ನಮ್ಮ ಶಕ್ತಿಗಳು ಎಂದು ನಾವು ಭಾವಿಸಿಕೊಂಡಿರುವ ಆ ಎಲ್ಲಾ ತಾಕತ್ತುಗಳ ಹೊರತಾಗಿಯೂ ನಮ್ಮನ್ನು ಮಂಡಿಯೂರಿ ಕೂಡುವಂತೆ ಆಕೆ ಮಾಡಬಲ್ಲಳು.
ನಮ್ಮೆಲ್ಲ ಶಕ್ತಿಗಳ ಪೈಕಿ, ಮನುಷ್ಯರು ಸದಾ ಹೆಮ್ಮೆಪಡುವಂತಹ ಸಾಮರ್ಥ್ಯವೆಂದರೆ, ನಾವು ಕಾಯ್ದುಕೊಂಡು ಬಂದಿರುವ ಬಲವಾದ ಸಾಮಾಜಿಕ ಬಂಧನಗಳು. ನಮ್ಮ ಸೋದರತ್ವದ ಬಗ್ಗೆ ನಾವು ಸದಾ ಹೆಮ್ಮೆಪಡುತ್ತಿದ್ದೆವು. ಆದರೆ, ಕೋವಿಡ್-19 ಬರುವ ಮೂಲಕ ಅದು ಕೂಡ ನಮ್ಮಿಂದ ದೂರವಾಗುವಂತೆ ಆಗಿದೆ. ಅದಾಗ್ಯೂ, ಸಮಾನ ಮನಸ್ಕರ ಜೊತೆಯನ್ನು ಬಯಸುವ ನಮ್ಮ ಸ್ವಭಾವ ಇನ್ನೂ ಬಲವಾಗಿಯೇ ಇದೆ. ಹೀಗಾಗಿ, ಇಡೀ ಜಗತ್ತು ಸ್ಥಗಿತವಾಗಿರುವಾಗಲೂ, ಆತ್ಮೀಯ ಸಂವಹನ ನಿಂತುಹೋಗಿರುವಾಗಲೂ, “ಸಾಮಾಜಿಕ (ದೈಹಿಕ) ಅಂತರ”ವನ್ನು ರೂಢಿಸಿಕೊಳ್ಳುತ್ತಿರುವಾಗಲೂ, ನಾವು ವಾಸ್ತವ ಜಗತ್ತನ್ನು ಅಪ್ಪಿಕೊಳ್ಳಲು ಪ್ರಾರಂಭಿಸಿದ್ದೇವೆ.
ದೈಹಿಕವಾಗಿ ಸಂವಹನ ನಡೆಸುವುದು ಸಾಧ್ಯವಿಲ್ಲದಿರುವುದರಿಂದ, ಜನ ಸಾಮಾಜಿಕ ತಾಣಗಳನ್ನು ಇನ್ನಷ್ಟು ಉತ್ಸಾಹದಿಂದ ಬಳಸತೊಡಗಿದ್ದಾರೆ. ಸಾಮಾಜಿಕ ತಾಣಗಳು ಜನರನ್ನು ಜೋಡಿಸುವ ಸಾಧನಗಳಾಗಿದ್ದವಷ್ಟೇ ಅಲ್ಲ, ಪ್ರಮುಖ ತಾಣಗಳು ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಮುಖ ಮೂಲಗಳೂ ಆಗಿದ್ದವು. ಈಗ ಇಂತಹ ಸಂಕಷ್ಟ ಕಾಲದಲ್ಲಿ, ಜನರ ನಿರ್ಧರಿಸುವ ಪ್ರಕ್ರಿಯೆಯ ಮೇಲೆಯೂ ಅವು ಕ್ರಮೇಣ ಪ್ರಭಾವ ಬೀರುವಂತಾಗಿದೆ. ಸಾಮಾಜಿಕ ತಾಣಗಳ ಮೂಲಕ ಮಾಹಿತಿ ಹರಿವು ನಿಜಕ್ಕೂ ವರವಾಗಿದ್ದರೂ ಸಹ ತಪ್ಪು ಮಾಹಿತಿಯ ಹರಿವು ಆತಂಕ ತರುವಂತಹ ಸಂಗತಿಯಾಗಿ ಪರಿಣಮಿಸಿದೆ. ಕೋವಿಡ್-19 ಕುರಿತ ನಿಖರ ಮತ್ತು ಕಲಸುಮೇಲೋಗರ ಮಾಹಿತಿ ವಿಧಗಳೆರಡರ ಉಕ್ಕುವಿಕೆ ಎಂಬ “ಸಾಂಕ್ರಾಮಿಕ ಮಾಹಿತಿ”ಯು ಅಸಲಿ ಸೋಂಕು ನಿಗ್ರಹ ಪ್ರಯತ್ನಕ್ಕೆ ಎಲ್ಲಿ ಅಡ್ಡಿಯಾಗುತ್ತದೋ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ.
ತಪ್ಪು ಸಂದೇಶ ಹರಡುವುದನ್ನು ತಡೆಯುವಲ್ಲಿ ವೈಫಲ್ಯತೆ ತೋರುವ ಕಾರಣಕ್ಕೆ ಸಾಮಾಜಿಕ ಮಾಧ್ಯಮ ಕಂಪನಿಗಳ ಮೇಲೆ ಸದಾ ಗಮನ ಇರುತ್ತದೆ. ಆದರೆ, ಈ ಸಲ ವೈಫಲ್ಯತೆಯೇ ಪ್ರಮುಖ ವಿಷಯವಾಗಿಲ್ಲ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಈ ಕಂಪನಿಗಳ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆಯಷ್ಟೇ ಅಲ್ಲ, ತಮ್ಮ ಹಿಂದಿನ ತಪ್ಪುಗಳನ್ನು ತಿದ್ದುಕೊಳ್ಳುವ ಅವಕಾಶವನ್ನೂ ಅವಕ್ಕೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಂದರ್ಭಕ್ಕೆ ಸೂಕ್ತವಾಗುವ ರೀತಿ ಪುಟಿದೇಳುವ ಪ್ರಯತ್ನಗಳನ್ನು ಈ ಸಾಮಾಜಿಕ ಮಾಧ್ಯಮ ದೈತ್ಯರು ನಡೆಸಿದ್ದಾರೆ.