ಕರ್ನಾಟಕ

karnataka

ETV Bharat / bharat

ಪಾಕ್​ನಲ್ಲಿ ಭಾರೀ ಹಿಮಪಾತ: 93ಕ್ಕೆ ತಲುಪಿದ ಸಾವಿನ ಸಂಖ್ಯೆ

ಪಾಕಿಸ್ತಾನ ಮತ್ತು ಪಿಒಕೆಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಇದರಿಂದ ಸಾವನ್ನಪ್ಪಿದವರ ಸಂಖ್ಯೆ 93ಕ್ಕೆ ತಲುಪಿದೆ. ಇನ್ನು ಹಿಮಪಾತ ಹೆಚ್ಚಾಗುವ ಸಾಧ್ಯತೆಯಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

Pakistan
ಪಾಕ್​ನಲ್ಲಿ ಭಾರೀ ಹಿಮಪಾತ

By

Published : Jan 15, 2020, 1:09 PM IST

ಇಸ್ಲಾಮಾಬಾದ್:ಪಾಕಿಸ್ತಾನ ಮತ್ತು ಪಿಒಕೆಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಇದರಿಂದ ಸಾವನ್ನಪ್ಪಿದವರ ಸಂಖ್ಯೆ 93ಕ್ಕೆ ತಲುಪಿದೆ. ಪಾಕಿಸ್ತಾನದ ಹವಾಮಾನ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಹಾನಿಗೊಳಗಾದವರನ್ನು ರಕ್ಷಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಉಂಟಾದ ಹಿಮಪಾತದಿಂದ ನೂರಾರು ಕಟ್ಟಡಗಳು ಹಾನಿಗೊಳಗಾಗಿವೆ. ಇಲ್ಲಿಯವರೆಗೆ 66 ಜನರು ಸಾವನ್ನಪ್ಪಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಕನಿಷ್ಠ 84 ಮನೆಗಳು,17 ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿದ್ದು, 94 ಮನೆಗಳು ಮತ್ತು ಮಸೀದಿಗಳು ಭಾಗಶಃ ಹಾನಿಯಾಗಿವೆ. ಈ ಘಟನೆಯಲ್ಲಿ ಹತ್ತೊಂಬತ್ತು ವಾಹನಗಳು ಹಾನಿಗೀಡಾಗಿವೆ ಎಂದು ನೀಲಂ ಜಿಲ್ಲಾಧಿಕಾರಿ ರಾಜಾ ಮಹಮೂದ್ ಶಾಹಿದ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಬಲೂಚಿಸ್ತಾನದಲ್ಲಿ ಇಪ್ಪತ್ತು ಜನರು ಮತ್ತು ಸಿಯಾಲ್ಕೋಟ್ ಹಾಗೂ ಪಂಜಾಬ್​ನ ಇತರ ಜಿಲ್ಲೆಗಳಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಖೈಬರ್ ಪಖ್ತುನ್ಖ್ವಾ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನದ ಪ್ರಮುಖ ರಸ್ತೆ ಮತ್ತು ಹೆದ್ದಾರಿಗಳು ಹಿಮದಿಂದ ಆವೃತವಾಗಿವೆ. ಹಿಮಪಾತದಿಂದಾಗಿ ಕಣಿವೆಯ ಕೆಲವು ಪ್ರದೇಶಗಳಿಗೆ ರಕ್ಷಣಾ ತಂಡ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​​ ಅವರು ಸಂತ್ರಸ್ತರಿಗೆ ತುರ್ತಾಗಿ ಎಲ್ಲ ರೀತಿಯ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನ ವರದಿಯ ಪ್ರಕಾರ, ಸ್ವಾತ್, ಕೊಹಿಸ್ತಾನ್, ಶಾಂಗ್ಲಾ, ಬುನರ್, ಮನ್ಸೆಹ್ರಾ, ಅಬೋಟಾಬಾದ್, ಮುರ್ರಿ ಜಿಲ್ಲೆಗಳಲ್ಲಿ ಭಾರಿ ಹಿಮಪಾತ ಮತ್ತು ಮಳೆಯಿಂದಾಗಿ, ನಗರ ರಸ್ತೆಗಳು ಮುಚ್ಚಿ ಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ABOUT THE AUTHOR

...view details