ನವದೆಹಲಿ: ನಿಮ್ಮ ಮನೆಯ ಪುರುಷರೊಂದಿಗೆ ಚರ್ಚಿಸಿ ಮತ ಚಲಾಯಿಸಿ ಎಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ.
ಪುರುಷರೊಂದಿಗೆ ಚರ್ಚಿಸಿ ಮತ ಚಲಾಯಿಸಿ ಎಂದ ಕೇಜ್ರಿವಾಲ್ಗೆ ಚಾಟಿ ಬೀಸಿದ ಸಚಿವೆ - CM Arvind Kejriwal tweet
ಯಾರಿಗೆ ಮತ ಚಲಾಯಿಸಬೇಕು ಎಂದು ಸ್ವತಃ ನಿರ್ಧರಿಸುವಷ್ಟು ಸಮರ್ಥರು ಎಂದು ಮಹಿಳೆಯರನ್ನು ನೀವು ಪರಿಗಣಿಸುವುದಿಲ್ಲವೇ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಇಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಮಹಿಳೆಯರು ತಪ್ಪದೇ ಮತದಾನ ಮಾಡುವಂತೆ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದರು. ಮಹಿಳೆಯರು ಹೇಗೆ ಮನೆಯ ಜವಾಬ್ದಾರಿ ವಹಿಸಿಕೊಳ್ಳುತ್ತೀರೋ ಹಾಗೆಯೇ ದೇಶದ ಹಾಗೂ ದೆಹಲಿಯ ಜವಾಬ್ದಾರಿ ಕೂಡ ನಿಮ್ಮ ಹೆಗಲ ಮೇಲಿದೆ. ನೀವೆಲ್ಲರೂ ನಿಮ್ಮ ಮನೆಯ ಪುರುಷರನ್ನೂ ಕರೆದುಕೊಂಡು ಹೋಗಿ ಮತ ಚಲಾಯಿಸಬೇಕು. ಅಲ್ಲದೇ ಯಾರಿಗೆ ಮತದಾನ ಮಾಡಬೇಕೆಂಬುದನ್ನು ನಿಮ್ಮ ಮನೆಯ ಪುರುಷರೊಂದಿಗೆ ಚರ್ಚೆ ಮಾಡಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಸ್ಮೃತಿ ಇರಾನಿ, ಯಾರಿಗೆ ಮತ ಚಲಾಯಿಸಬೇಕು ಎಂದು ಸ್ವತಃ ನಿರ್ಧರಿಸುವಷ್ಟು ಸಮರ್ಥರು ಎಂದು ಮಹಿಳೆಯರನ್ನು ನೀವು ಪರಿಗಣಿಸುವುದಿಲ್ಲವೇ? ಎಂದು ಪ್ರಶ್ನಿಸಿ, 'ಮಹಿಳಾ ವಿರೋಧಿ ಕೇಜ್ರಿವಾಲ್' ಎಂದು ಟ್ವೀಟ್ ಮಾಡಿದ್ದಾರೆ.