ತಮ್ಮನ್ನು ತಾವು ಸಣ್ಣ ಗಾತ್ರದ ಉದ್ದಿಮೆಗಳು ಎಂದು ಕರೆದುಕೊಂಡಿದ್ದರೂ ದೇಶದಲ್ಲಿ ಏನಿಲ್ಲೆಂದರೂ 12 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಅವು ಹೊಂದಿವೆ. ಆರ್ಥಿಕ ಸ್ಥಗಿತತೆಯಿಂದ ಮೊದಲೇ ಜರ್ಜರಿತಗೊಂಡಿದ್ದ ಈ ಸಣ್ಣ ಉದ್ದಿಮೆಗಳು ಕೊರೊನಾದಿಂದಾಗಿ ಮತ್ತಷ್ಟು ತೀವ್ರವಾದ ಬಿಕ್ಕಟ್ಟಿಗೆ ಸಿಲುಕಿಕೊಂಡಿವೆ.
ಕೋವಿಡ್ ಹಿನ್ನೆಲೆ ದೇಶದ ಜನತೆಯ ಮೇಲೆ ಹೇರಲಾದ ಲಾಲ್ಡೌನ್ನಿಂದಾಗಿ ಮತ್ತು ಉದ್ಯಮ ವ್ಯವಹಾರಗಳೆಲ್ಲ ಕುಸಿದ ಪರಿಣಾಮವಾಗಿ ಬಿಕ್ಕಟ್ಟಿಗೆ ಸಿಲುಕಿದ ಸೂಕ್ಷ್ಮ-ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಕೇಂದ್ರ ಸರ್ಕಾರ ಘೋಷಿಸಿರುವ ‘ಆತ್ಮನಿರ್ಭರ್ ಪ್ಯಾಕೇಜ್’ ಮೇಲೆ ಬಹಳಷ್ಟು ಭರವಸೆ ಇಟ್ಟುಕೊಂಡಿವೆ. ಈ ಪ್ಯಾಕೇಜಿನ ಅಡಿಯಲ್ಲಿ 3 ಲಕ್ಷ ಕೋಟಿ ರೂ.ಗಳನ್ನು ಸಾಲ ವಿತರಣೆ ಯೋಜನೆ ಅಡಿಯಲ್ಲಿ ಬಳಸಲಾಗುತ್ತದೆ ಮತ್ತು ಇದರಿಂದ 45 ಲಕ್ಷ ಘಟಕಗಳಿಗೆ ಸಹಾಯಕವಾತ್ತದೆ ಎಂದೆಲ್ಲ ದೊಡ್ಡ ಮಟ್ಟದಲ್ಲಿ ಮೂರು ತಿಂಗಳ ಹಿಂದೆ ಪ್ರಚಾರ ಪಡೆದಿದ್ದು, ಈ ಉದ್ಯಮಗಳಿಗೆ ಏನೂ ಸಹಕಾರಿಯಾಗಿ ಪರಿಣಮಿಸಲಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಕೊರತೆಯಿಂದ ಬಿಕ್ಕಟ್ಟಿನಲ್ಲಿ ಸಿಲುಕಿರುವ ಉದ್ಯಮಗಳಲ್ಲಿ MSMEಗಳನ್ನು ಸಹ ಪಟ್ಟಿ ಮಾಡಿತ್ತು. ಇದೇ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಸಿದ್ಧಪಡಿಸಿರುವ ಅಂಕಿ ಅಂಶಗಳಲ್ಲಿ ಸಹ ಸಣ್ಣ ಉದ್ಯಮಗಳ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎಂದು ನೋಡಬಹುದು. ಲಾಕ್ಡೌನ್ ಕಾರಣದಿಂದಾಗಿ ಸಾಲ ವಿತರಣೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 17%ರಷ್ಟು ಕುಸಿತವಾಗಿದೆ. ಈ ಸಣ್ಣ ಉದ್ಯಮಗಳ ದೈನಂದಿನ ನಿರ್ವಹಣೆಗೂ ಹಣಕಾಸಿನ ಕೊರತೆ ಎದುರಾಗಿದೆ. ಹಳೆಯ ಸಾಲಗಳ ಮೇಲಿನ ಬಡ್ಡಿ ಹೊರೆ ಹೆಚ್ಚಾಗಿದೆ, ಇದರ ಜೊತೆಗೆ ಕೌಶಲ್ಯಾಧಾರಿತ ಶ್ರಮ ಮತ್ತು ಕಚ್ಚಾ ವಸ್ತುಗಳ ಕೊರತೆ ಸಹ ಸಣ್ಣ ಉದ್ಯಮಗಳನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.
ಹಾಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಂದು ಉದಾರ ರೂಪದ ಸಾಲ ಯೋಜನೆಯನ್ನು ಕನಿಷ್ಟ ಹತ್ತು ವರ್ಷಗಳವರೆಗೆ ಕಡಿಮೆ ಮೊತ್ತದ ಬಡ್ಡಿದರದಲ್ಲಿ, ಸೂಕ್ತ ಮರುಪಾವತಿ ಸೌಲಭ್ಯಗಳೊಂದಿಗೆ ಘೋಷಿಸಿ ಜಾರಿಗೊಳಿಸಿದ್ದಲ್ಲಿ ಈ ಹೊತ್ತಿಗೆ ಹೆಚ್ಚಿನ ಸಾಲ ಮರುಪಾವತಿಯಾಗಿರುತ್ತಿತ್ತು. ವಾಸ್ತವದಲ್ಲಿ ಏನಾಗುತ್ತಿದೆಯೆಂದರೆ ಹಲವು ವರದಿಗಳ ಪ್ರಕಾರ ಬ್ಯಾಂಕುಗಳು ಸಣ್ಣ ಉದ್ಯಮಗಳಿಗೆ 9-14 ಶೇಕಡಾವಾರು ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಸಾಲ ಹಂಚಿಕೆಯಲ್ಲಿ ಆಗಿರುವ ಕುಸಿತಕ್ಕೆ ಕಾರಣಗಳೇನು ಎಂದು ರಿಸರ್ವ್ ಬ್ಯಾಂಕ್ ಕಂಡುಕೊಳ್ಳಲು ಯತ್ನಿಸುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಮಟ್ಟದಲ್ಲಿ ಇಂಬು ನೀಡುವ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಬೇಕಿರುವ ಸಂದರ್ಭದಲ್ಲಿ ಸಾಲದ ಮೇಲೆ ದೊಡ್ಡ ಮೊತ್ತದ ಬಡ್ಡಿ ಹೇರುವುದು ಮತ್ತು ಪರುಪಾವತಿಗೆ ಕಠಿಣ ಷರತ್ತುಗಳನ್ನು ವಿಧಿಸುವುದು ಇಡೀ ಪ್ಯಾಕೇಜಿನ ಬದ್ಧತೆಯ ಕುರಿತಾಗಿಯೇ ಅನುಮಾನಗಳನ್ನು ಹುಟ್ಟಿಸುತ್ತದೆ.