ಲೇಹ್: ಚೀನಾ ಜೊತೆಗಿನ ಗಡಿ ಉದ್ವಿಗ್ನತೆಯನ್ನು ಪರಿಶೀಲಿಸಲು ಲೇಹ್‌ಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಎಂ.ಎಂ.ನರವನೆ ಅವರು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಭಾರತೀಯ ಸೇನೆಯು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ ಎಂದಿದ್ದಾರೆ.
ಗುರುವಾರ ಲಡಾಖ್‌ಗೆ ಆಗಮಿಸಿದ ನರವನೆ, ಸೈನಿಕರ ಮನೋಸ್ಥೈರ್ಯ ಹೆಚ್ಚಾಗಿದೆ ಮತ್ತು ಅವರು ಯಾವುದೇ ಸವಾಲನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ನಿನ್ನೆ ಲೇಹ್ ತಲುಪಿದ ನಂತರ, ನಾನು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅಧಿಕಾರಿಗಳು ಮತ್ತು ಜೆಸಿಒಗಳೊಂದಿಗೆ (ಜೂನಿಯರ್ ಕಮಿಷನ್ಡ್ ಆಫೀಸರ್ಸ್) ಮಾತನಾಡಿದ್ದೇನೆ. ನಾನು ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಸೈನಿಕರ ಮನೋಸ್ಥೈರ್ಯವು ತುಂಬಾ ಹೆಚ್ಚಾಗಿದೆ ಮತ್ತು ಅವರು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ನರವನೆ ತಿಳಿಸಿದ್ದಾರೆ.
ಎಲ್ಎಸಿಯ ಉದ್ದಕ್ಕೂ ಪ್ರಸ್ತುತ ಪರಿಸ್ಥಿತಿ ಸ್ವಲ್ಪ ಸೂಕ್ಷ್ಮ ಮತ್ತು ಗಂಭೀರವಾಗಿದೆ. ಆದರೆ ನಮ್ಮ ಸುರಕ್ಷತೆಯಲ್ಲಿ ನಾವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಪರಿಸ್ಥಿತಿ ಬದಲಾಗದೆ ಉಳಿಯುತ್ತದೆ ಎಂದು ನಮಗೆ ಭರವಸೆ ಇದೆ ಎಂದಿದ್ದಾರೆ.
ಲಡಾಖ್ ಪ್ರದೇಶಗಳಲ್ಲಿ ಅತಿಕ್ರಮಣ ಮಾಡುವ ಚೀನಾ ಸೈನ್ಯದ ಪ್ರಯತ್ನಗಳನ್ನು ಭಾರತೀಯ ಪಡೆಗಳು ವಿಫಲಗೊಳಿಸಿದ ನಂತರ ಭಾರತೀಯ ಸೇನೆ ಮತ್ತು ಚೀನಾ ಸೈನ್ಯದ ನಡುವೆ ಬ್ರಿಗೇಡಿಯರ್ ಮಟ್ಟದ ಮಾತುಕತೆ ನಡೆಯುತ್ತಿದೆ.