ನವದೆಹಲಿ:ಒಂಟಿ ವ್ಯಕ್ತಿ ಕಾರು ಚಾಲನೆ ಅಥವಾ ವ್ಯಾಯಾಮ/ಸೈಕ್ಲಿಂಗ್ ಮಾಡುವಾಗ ಫೇಸ್ ಮಾಸ್ಕ್ ಹಾಕಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಕಾರಿನಲ್ಲಿ ಒಬ್ಬರಿಗಿಂತಲೂ ಹೆಚ್ಚಿನ ಪ್ರಯಾಣಿಕರಿದ್ದರೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದ್ದಾರೆ.
ಕಾರಿನಲ್ಲಿ ಒಬ್ಬರೇ ಇರುವಾಗ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವೇ? ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಕೆಲ ದಿನಗಳಿಂದ ಹೆಚ್ಚಿನ ಜನರು ವ್ಯಾಯಾಮ ಮಾಡಲು ಹೊರಬರುತ್ತಿದ್ದು, ಗುಂಪುಗಳಾಗಿ ಅವರು ಈ ಕಾರ್ಯದಲ್ಲಿ ಮಗ್ನರಾಗುತ್ತಿರುವ ಕಾರಣ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಒಬ್ಬನೇ ವ್ಯಕ್ತಿ ಸೈಕ್ಲಿಂಗ್ ಮಾಡುವಾಗ ಮಾಸ್ಕ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆದರೆ ಒಬ್ಬರೇ ಓಡಾಡುವಾಗ ಫೇಸ್ ಮಾಸ್ಕ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಜತೆಗೆ ಕೊರೊನಾ ವಿರುದ್ಧ ಹೋರಾಟಲು ಜಾರಿಯಲ್ಲಿರುವ ನಿಯಮ ಪಾಲನೆ ಕಡ್ಡಾಯ ಎಂದು ತಿಳಿಸಿದ್ದಾರೆ.