ಇಸ್ಲಾಮಾಬಾದ್:ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಲ್ಪ ಸಂಖ್ಯಾತ ಸಿಖ್ ಸಮುದಾಯದ 19ರ ಹರೆಯದ ಹುಡುಗಿಯೊಬ್ಬಳನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದು ಆಕೆಯ ಪೋಷಕರು ದೂರು ನೀಡಿದ್ದು, ಈ ಸಂಬಂಧ ಆರು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹುಡುಗಿಯ ಪೋಷಕರು ವಿಡಿಯೋ ಸಂದೇಶವನ್ನು ಹರಿಬಿಟ್ಟಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಮಧ್ಯಪ್ರವೇಶಿಸಿ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.
ಮೊಹಮ್ಮದ್ ಹಸನ್ ಎಂಬಾತ ಹುಡುಗಿಯನ್ನು ಮದುವೆಯಾಗಿದ್ದು, ಆತನ ಸ್ನೇಹಿತ ಅರ್ಸಲಾನ್ ಸೇರಿ ಆರು ಮಂದಿ ವಿರುದ್ಧ ದೂರು ದಾಖಲಾಗಿದೆ.
ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಆ ಹುಡುಗಿ ನನ್ನೊಂದಿಗೆ ಮನೆಯವರಿಗೆ ತಿಳಿಯದಂತೆ ಓಡಿಬಂದಿದ್ದಾಳೆ ಎಂದು ಮದುವೆಯಾಗಿರುವ ಹುಡುಗ ತಿಳಿಸಿದ್ದಾನೆ. ಆದ್ರೆ, ಹುಡುಗಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಆಕೆಯ ಪರ ವಾದ ಮಾಡುತ್ತಿರುವ ವಕೀಲೆ ತಿಳಿಸಿದ್ದಾರೆ.
ಮದುವೆಯಾಗಿರುವ ಯುವತಿಯು ತಾನು ತನ್ನ ಸ್ವ ಇಚ್ಛೆಯಿಂದ ಮದುವೆಯಾಗುತ್ತಿರುವುದಾಗಿ ಹೇಳಿಕೆ ನೀಡಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ. ಇದು ಬಲವಂತದ ಮತಾಂತರವೋ ಅಲ್ಲವೋ ಎನ್ನುವ ಕುರಿತು ತನಿಖೆ ನಡೆಯುತ್ತಿದೆ.
ಈ ಹಿಂದೆ ಇಬ್ಬರು ಯುವತಿಯರನ್ನು ಬಲವಂತವಾಗಿ ಮತಾಂತರಿಸಲಾಗಿತ್ತು. ಕಳೆದ ಮಾರ್ಚ್ನಲ್ಲಿ ಇಮ್ರಾನ್ ಖಾನ್ ಮಧ್ಯಪ್ರವೇಶಿಸಿ ತನಿಖೆಗೆ ಆದೇಶಿಸಿದ್ದರು.