ಗುವಾಹಟಿ(ಅಸ್ಸೋಂ):ಕಳೆದ ಎರಡು ವರ್ಷಗಳ ಹಿಂದೆ ನಡೆದ ಗೆಳತಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿಗುವಾಹಟಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಅಗರ್ವಾಲ್ 2015ರ ಸಾಲಿನಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದರು. ತದನಂತರ ಅಲ್ಲಿನ ಕೆಸಿ ದಾಸ್ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಶ್ವೇತಾಗೆ ಗೋವಿಂದ್ ಪರಿಚಯವಾಗಿದ್ದನು.
2017ರ ಡಿಸೆಂಬರ್ 4ರಂದು ಶ್ವೇತಾ ತನ್ನ ಗೆಳೆಯ ಗೋವಿಂದ್ನ ಬಾಡಿಗೆ ಮನೆಗೆ ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗೋವಿಂದ್ ಆಕೆಯ ಮೇಲೆ ಹಲ್ಲೆ ಮಾಡಿದ್ದನು. ಪ್ರಜ್ಞೆ ತಪ್ಪಿದ್ದ ಆಕೆಯನ್ನ ಬಾತ್ ರೂಂನಲ್ಲಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಈ ವೇಳೆ ಗೋವಿಂದ್ ತಾಯಿ ಹಾಗೂ ಅಕ್ಕ ಸಹಾಯ ಮಾಡಿದ್ದರು. ಜತೆಗೆ ವಿಚಾರಣೆ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಹೇಳಿಕೆ ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ್ ತಾಯಿ ಹಾಗೂ ಅಕ್ಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿತ್ತು. ಇದೀಗ ಬರೋಬ್ಬರಿ ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಆರೋಪಿ ಗೋವಿಂದ್ ಸಿಂಘಾಲ್‌ಗೆ ಮರಣ ದಂಡನೆ, ತಾಯಿ ಕಮಲಾ ದೇವಿ ಹಾಗೂ ಅಕ್ಕ ಭುವಾನಿ ಸಿಂಘಾಲ್ ಜೀವಾವಧಿ ಜೈಲು ಶಿಕ್ಷೆ ನೀಡಿದೆ.