ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ಕೇವಲ ಏಳು ವರ್ಷ ವಯಸ್ಸಿನ ಮೆಹ್ರೂನ್ ನಿಸ್ಸಾ, ನಿನ್ನೆಯವರೆಗೂ ತಾನು ಆಡಿ ನಲಿದಿದ್ದ ಮನೆಯ ಅವಶೇಷಗಳತ್ತ ಕಿರು ನೋಟವನ್ನು ಬೀರುತ್ತಾಳೆ. ಕೆಲ ಕ್ಷಣಗಳ ಹಿಂದಷ್ಟೇ ಧ್ವಂಸಗೊಂಡಿದ್ದ ಆ ಮನೆಯ ಮೆಟ್ಟಿಲುಗಳನ್ನು ಇಳಿಯಲು ತನ್ನ ತಂದೆಯ ಕೈ ಬೆರಳನ್ನು ಗಟ್ಟಿಯಾಗಿ ಹಿಡಿದಿದ್ದ ಆಕೆಗೆ, ಅದುವೇ ತನ್ನ ತಂದೆಯೊಂದಿಗೆ ತಾನು ಕಳೆಯುತ್ತಿರುವ ಕೊನೆಯ ಕ್ಷಣ ಎಂಬುದು ತಿಳಿದಿರಲಿಲ್ಲ.. ಅಂಥದ್ದೇನಾಯ್ತು ಅಲ್ಲಿ...?
ಅದು ಜೂನ್ 8 ಮತ್ತು 9 ರ ಮಧ್ಯರಾತ್ರಿ ಸಮಯ. ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪಡೆಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲಾ ಕೇಂದ್ರದಿಂದ 1.5 ಕಿಲೋಮೀಟರ್ ದೂರದಲ್ಲಿರುವ ಪಿಂಜೋರಾ ಗ್ರಾಮದಲ್ಲಿರುವ ನಿಸ್ಸಾ ಅವರ ಮನೆಯನ್ನು ಸುತ್ತುವರಿದಿದ್ದವು. ನಿಸ್ಸಾ ತನ್ನ ತಾಯಿಯೊಂದಿಗೆ ವಾಸವಿದ್ದು, ತನ್ನ ಕುಟುಂಬದೊಂದಿಗೆ ದೂರವಾಗಿದ್ದಳು.
ಹಿಜ್ಬುಲ್ ಮುಜಾಹಿದ್ದೀನ್ ಜಿಲ್ಲಾ ಕಮಾಂಡರ್, ಉಮರ್ ಧೋಬಿ ನೇತೃತ್ವದ ನಾಲ್ವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಗುಂಪು ನಿಸ್ಸಾ ಮನೆಯಲ್ಲಿ ಅವಿತುಕೊಂಡಿದ್ದರು. ಆ ಮನೆಯನ್ನು ಭದ್ರತಾ ಪಡೆ ಸುತ್ತುವರಿದ ಕೆಲವೇ ಕ್ಷಣಗಳಲ್ಲಿ, ಸ್ಥಳದಲ್ಲಿ ಭಾರಿ ಗುಂಡಿನ ಚಕಮಕಿ ನಡೆಯಿತು. ಬೆಳಗ್ಗೆ, ಭದ್ರತಾ ಪಡೆಗಳು ಗುಂಡು ಮತ್ತು ಶೆಲ್ಗಳಿಂದ ಮನೆಯನ್ನು ಗುರಿಯಾಗಿಸಿ ದಾಳಿ ನಡೆಸಿದವು. ಕೆಲವೇ ಗಂಟೆಗಳಲ್ಲಿ ಮನೆ ಕುಸಿದು ಒಳಗೆ ಅಡಗಿದ್ದ ಎಲ್ಲ ಉಗ್ರರು ಹತರಾದರು. ಅಷ್ಟರಲ್ಲಿ ನಿಸ್ಸಾ ಮನೆ ಧರಾಶಾಹಿಯಾಗಿತ್ತು.
ಇಷ್ಟೆಲ್ಲಾ ಆದ ಕೆಲವೇ ಗಂಟೆಗಳ ಬಳಿಕ ಮನೆ ಸುತ್ತಮುತ್ತ ಇದ್ದ ಪೊಲೀಸ್ ಕಣ್ಗಾವಲು ತೆಗೆದುಹಾಕಲಾಯಿತು. ಆ ನಂತರ ನಿಸ್ಸಾ ಅವರ ಕುಟುಂಬಕ್ಕೆ ಎನ್ಕೌಂಟರ್ ನಡೆದ ಸ್ಥಳಕ್ಕೆ ಹೋಗಿ ಅವರ ಧ್ವಂಸಗೊಂಡ ಮನೆಯನ್ನು ನೋಡಲು ಅನುಮತಿ ನೀಡಲಾಯಿತು. ಸತತ 12 ವರ್ಷಗಳ ಕಾಲ ಬೆವರು ಸುರಿಸಿ ದುಡಿದು ಕಷ್ಟಪಟ್ಟು ನಿರ್ಮಿಸಿದ ಮನೆ ಕೆಲ ಕ್ಷಣಗಳಲ್ಲೇ ನೆಲಸಮವಾಗಿದ್ದನ್ನು ಕಂಡು ನಿಸ್ಸಾ ಕಟುಂಬಕ್ಕೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ಅದೇ ಸ್ಥಳದಲ್ಲಿ ನಿಂತು ಈಟಿವಿ ಭಾರತದ ಜೊತೆ ವಿವರಿಸುವಾಗ ನಿಸ್ಸಾ ತಂದೆ 32 ವರ್ಷದ ತಾರಿಕ್ ಅಹ್ಮದ್ ಪಾಲ್ ಕಣ್ಣಾಲಿಗಳು ಒದ್ದೆಯಾಗಿದ್ದವು.