ನವದೆಹಲಿ :ನಗರದ ನಜಾಫ್ಗಢ, ನರೇಲಾ ಮತ್ತು ಬಿಂದಾಪುರ್ನಲ್ಲಿ ನಡೆದ ಸರಣಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರೋಡೆಕೋರ ಕುಖ್ಯಾತ ಲಾರೆನ್ಸ್ ಬಿಶ್ನೊಯ್ ಗ್ಯಾಂಗ್ನ ಸದಸ್ಯರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.
ಜೂನ್ 23 ರಂದು ರಾಜಧಾನಿಯ ನಜಾಫ್ಗರ್ ಮತ್ತು ನರೇಲಾದಲ್ಲಿ ಗುಂಡಿನ ದಾಳಿ ನಡೆದಿತ್ತು. ಅಲ್ಲಿನ ಪಿಸಿ ಜ್ಯುವೆಲ್ಲರ್ಸ್ ಮತ್ತು ಗಹಾನಾ ಜ್ಯುವೆಲ್ಲರ್ಸ್ ಅಂಗಡಿಗಳ ಮುಂದೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ವೇಳೆ ಅವರು ಬೆದರಿಕೆ ಪತ್ರವೊಂದನ್ನು ಇಟ್ಟು ಹೋಗಿದ್ದರು. ಅದರಲ್ಲಿ, ಸೇಥಿ ಭಾಯ್ ಲಾರೆನ್ಸ್ ಬಿಶ್ನೋಯ್ ಕಲಾ ಗ್ರೂಪ್ ಎಂದು ಸಹಿ ಮಾಡಲಾಗಿತ್ತು. ಅದೇ ರೀತಿ, ನರೇಲಾದ ಆಸ್ತಿ ವ್ಯಾಪಾರಿ ಕಚೇರಿ ಬಳಿ ಗುಂಡಿನ ದಾಳಿ ನಡೆಸಿ ಅಲ್ಲಿಯೂ ಪತ್ರವೊಂದನ್ನು ಇಟ್ಟು ಹೋಗಿದ್ದರು. ಅದರಲ್ಲಿ, ಲಾರೆನ್ಸ್ ಬಿಶ್ನೋಯ್ ಜೊತೆ ಸೋನು - ಅಕ್ಷಯ್ ಪಾಲ್ಡಾ-ಸಚಿನ್ ಭಂಜಾ-ಸೇಥಿ ಭಾಯ್ ಹೆಸರನ್ನು ಬರೆಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ಪುರಾನ್ ಪಂತ್ ಮತ್ತು ಎಸ್‌ಐ ದೀಪಕ್ ಅವರ ತಂಡವು ವಿಶೇಷ ತನಿಖಾ ತಂಡ ಎಸಿಪಿ ಜಸ್ಬೀರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಮಾಹಿತಿ ಕಲೆ ಹಾಕಿ, ಆರೋಪಿಗಳಾದ ಮಂಜೀತ್, ವಿಶ್ವಜೀತ್, ವಿಕಾಸ್, ಹರೀಶ್, ಬಚ್ಚಿ ಮತ್ತು ಬ್ರಿಜೇಶ್ ಎಂಬವರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಲಾರೆನ್ಸ್ ಬಿಶ್ನೋಯ್, ಕಲಾ ಜಾತ್ರಿ, ಅಕ್ಷಯ್ ಪಾಲ್ನಾ, ರಾಜು ಬಸೋಡಿ, ಸೇಥಿ ಗ್ಯಾಂಗ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಹರೀಶ್ ನಜಾಫ್ಗರ್ನ ಧನ್ಸಾ ರಸ್ತೆ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ, ಆತ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ, ಪೊಲೀಸರು ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಬಂಧಿತನಿಂದ ಪಿಸ್ತೂಲ್, ಗುಂಡು ವಶಪಡಿಸಿಕೊಂಡಿರುವ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹರೀಶ್, ವಿಶ್ವಜೀತ್, ಮಂಜೀತ್ ಮತ್ತು ವಿಕಾಸ್ ಅಲಿಯಾಸ್ ದಿಲ್ಜಲೆ ಜೊತೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿರುವ ಸೇಥಿ ಮತ್ತು ಕಪಿಲ್ ಅನತಿಯಂತೆ ಹರೀಶ್, ಬ್ರಿಜೇಶ್, ಮಂಜೀತ್ ಮತ್ತು ವಿಕಾಸ್ ದುಷ್ಕೃತ್ಯಗಳನ್ನು ಎಸಗುತ್ತಿದ್ದರು. ಇವರೆಲ್ಲರೂ ಲಾರೆನ್ಸ್ ಬಿಶ್ನೋಯ್, ಅಕ್ಷಯ್ ಪಲಾಡಾ ಮತ್ತು ಕಲಾ ಜರೆಡಿ ಗ್ಯಾಂಗ್ನ ಸದಸ್ಯರಾಗಿದ್ದಾರೆ.