ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಕೇಂದ್ರ ಸಚಿವ ಅರವಿಂದ ಸಾವಂತ್ ಪ್ರಕಟಿಸಿದ್ದಾರೆ.
‘ಶಿವಸೇನೆ ಸತ್ಯದ ಬದಿಯಲ್ಲಿದೆ. ಅಂತಹ ವಾತಾವರಣದಲ್ಲಿ ನಾನು ಕೇಂದ್ರ ಸರ್ಕಾರದಲ್ಲಿ ಯಾಕೆ ಇರಬೇಕು? ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇದಕ್ಕಾಗಿ ಇಂದು ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಟಿ ನಡೆಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
2019 ರ ಲೋಕಸಭಾ ಚುನಾವಣೆಯ ನಂತರ ಸಾವಂತ್ ಕೇಂದ್ರ ಸರ್ಕಾರದ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಕೈಗಾರಿಕಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಮಧ್ಯೆ ಅವರ ರಾಜೀನಾಮೆ ವಿಷಯ ಕುತುಹೂಲ ಕೆರಳಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ ಜೊತೆಗೂಡಿ ಸರ್ಕಾರ ರಚಿಸುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ. ಆದ್ರೆ ಶಿವಸೇನೆ ಮುಖ್ಯಮಂತ್ರಿ ಹುದ್ದೆಯನ್ನು ಕೇಳಿದೆ, ಇದನ್ನು ಮಹಾರಾಷ್ಟ್ರದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ತಿರಸ್ಕರಿಸಿದೆ. 288 ಸದಸ್ಯ ಬಲವಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಮತ್ತು ಶಿವಸೇನೆ 56 ಸ್ಥಾನಗಳನ್ನು ಗೆದ್ದಿವೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಸುಳಿವು ನೀಡಿದೆ. ನಂತರ ಪಕ್ಷವು ತನ್ನ ಮಿತ್ರ ಪಕ್ಷವಾದ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದೆ. ಈಗ ಅರವಿಂದ್ ಸಾವಂತ್ ರಾಜೀನಾಮೆ ನೀಡುವ ಕುರಿತು ಪ್ರಕಟಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.