ಅಹಮದಾಬಾದ್:ಭೂಗತ ಪಾತಕಿ ಚೋಟಾ ಶಕೀಲ್ ಆದೇಶ ಮೇರೆಗೆ ಬಿಜೆಪಿ ಮುಖಂಡರೊಬ್ಬರ ಹತ್ಯೆಗೆ ಸಂಚು ಹಾಕಿ ಕುಳಿತಿದ್ದ ಆರೋಪದಡಿ ಶಾರ್ಪ್ ಶೂಟರ್ ಓರ್ವನನ್ನು ಗುಜರಾತ್ ಉಗ್ರ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ.
24 ವರ್ಷದ ಮುಂಬೈ ನಿವಾಸಿ ಇಫ್ರಾನ್ ಶೇಖ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಪಾತಕಿ ಚೋಟಾ ಶಕೀಲ್ ಆದೇಶದ ಮೇಲೆ ಬಿಜೆಪಿ ನಾಯಕ ಗೋರ್ಧನ್ ಜಡಾಫಿಯಾ ಹತ್ಯೆಗೆ ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಇನ್ನು ಬಂಧಿತ ಶಾರ್ಪ್ ಶೂಟರ್ ಇಫ್ರಾನ್ ಶೇಖ್ನನ್ನು ಕೋವಿಡ್-19 ಪರೀಕ್ಷೆಗೊಳಪಡಿಸಿದ್ದು ,ಆತನ ವರದಿ ಪಾಸಿಟಿವ್ ಬಂದಿದೆ. ಶೇಖ್ನನ್ನು ನಗರದ ಆಸ್ಪತ್ರೆಯೊಂದರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಚೇತರಿಸಿಕೊಂಡ ನಂತರವೇ ಆತನನ್ನು ಬಂಧಿಸಿ ಮುಂದಿನ ತನಿಖೆಯನ್ನು ನಡೆಸಲಾಗುತ್ತದೆ ಎಂದು ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹತ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡಿದ್ದ ಗುಜರಾತ್ ಉಗ್ರ ನಿಗ್ರಹ ದಳವು ಹೋಟೆಲ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ, ಇಫ್ರಾನ್ ಪರಾರಿಯಾಗಲು ಯತ್ನಿಸಿದ್ದ. ಬಂಧನದ ಬಳಿಕ ಇಫ್ರಾನ್ ಶೇಖ್ ಸತ್ಯ ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.