ಮುಂಬೈ(ಮಹಾರಾಷ್ಟ್ರ):ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು "ರಿಮೋಟ್ ಕಂಟ್ರೋಲ್" ನಂತೆ ಎಂದಿಗೂ ವರ್ತಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಠಾಕ್ರೆ, ಶರದ್ ಪವಾರ್ ಬಗ್ಗೆ ವಿಷಯ ಪ್ರಸ್ತಾಪಿಸಿದ್ದು, ಪವಾರ್ ರಾಜಕೀಯ ರಂಗದಲ್ಲಿ ಒಬ್ಬ ಅನುಭವವುಳ್ಳ ಮುತ್ಸದ್ದಿಯಾಗಿದ್ದಾರೆ. ಅವರ ಸಲಹೆಗಳು ನಮ್ಮ ಸರ್ಕಾರಕ್ಕೆ ಪ್ರಮುಖವಾದದು, ನಾನೊಬ್ಬ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರು ರಿಮೋಟ್ ಕಂಟ್ರೋಲ್ನಂತೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲ ಎಂದು ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ದಿನಗಳಲ್ಲಿ ಮತ್ತು ಚುನಾವಣೆಗೂ ಮುನ್ನ ಎರಡು ಪಕ್ಷಗಳ ನಡುವೆ ಕಲಹ ಏರ್ಪಟ್ಟಿದ್ದು ನಿಜ, ಅದು ಸರ್ವೇ ಸಾಮಾನ್ಯವಾದುದು. ಆದರೆ, ಈಗ ನಾವು ಒಟ್ಟಾಗಿ ಸರ್ಕಾರ ರಚಿಸಿದ್ದೇವೆ, ನಮ್ಮ ಮುಖ್ಯ ಧ್ಯೇಯ ಜನರಿಗೆ ಉತ್ತಮ ಆಡಳಿತ ನೀಡುವುದೇ ಆಗಿದೆ ಎಂದು ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ನಮ್ಮ ಸರ್ಕಾರದ ಮುಖ್ಯ ಉದ್ದೇಶ ಉತ್ತಮ ಆಡಳಿತವೇ ಹೊರತು ಬೇರೆಯವರ ಮೇಲೆ ಹಿಡಿತ ಸಾಧಿಸುವುದು ಅಲ್ಲ. ಅದಲ್ಲದೇ ಶರದ್ ಪವಾರ್ ಅವರ ಅನುಭವದ ಮೂಲಕ ಉತ್ತಮ ಸರ್ಕಾರ ನಡೆಸುವುದು ನಮ್ಮ ಉದ್ದೇಶ. ಅವರು ನಮಗೆ ಮಾರ್ಗದರ್ಶನ ನೀಡುತ್ತಾರೆ ಹೊರತು ರಿಮೋಟ್ ಕಂಟ್ರೋಲ್ನಂತೆ ವರ್ತಿಸುವುದಿಲ್ಲ ಎಂದು ಠಾಕ್ರೆ ಪವಾರ್ರನ್ನು ಹಾಡಿ ಹೊಗಳಿದ್ದಾರೆ.