ಹೈದರಾಬಾದ್(ತೆಲಂಗಾಣ):ಕಳೆದ 35 ದಿನಗಳಲ್ಲಿ ಹೈದರಾಬಾದ್‌ನಲ್ಲಿ ಸುಮಾರು 6 ಲಕ್ಷ ಜನರಿಗೆ ಕೋವಿಡ್ -19 ಸೋಂಕು ತಗುಲಿರಬಹುದು ಎಂದು ಹೈದರಾಬಾದ್ ಮೂಲದ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (ಸಿಸಿಎಂಬಿ) ಮತ್ತು ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ಜಂಟಿ ಅಧ್ಯಯನವೊಂದರಲ್ಲಿ ಬಹಿರಂಗಪಡಿಸಿದೆ.
ಸಾರ್ಸ್-ಕೋವ್-2(SARS-CoV-2) ಅಂದ್ರೆ ಕೊರೊನಾದ ಎರಡನೇ ಅಲೆ ಅನ್ನಬಹುದಾದ ಸೋಂಕಿಗೆ ಒಳಗಾದ ವ್ಯಕ್ತಿಗಳು ಮೂಗಿನ ಮತ್ತು ಮೌಖಿಕ ಮಾರ್ಗಗಳ ಮೂಲಕ ಮಾತ್ರವಲ್ಲದೇ, ಮಲಗಳ ಮೂಲಕವೂ ವೈರಸ್ ಹರಡುತ್ತಾರೆ ಎಂದು ಹೇಳಲಾಗಿದೆ. ಹಾಗಾಗಿ ಸಂಶೋಧಕರು ಸೋಂಕಿನ ಹರಡುವಿಕೆಯನ್ನು ಅಂದಾಜು ಮಾಡಲು ಒಳಚರಂಡಿ ಹಾಗೂ ತ್ಯಾಜ್ಯ ನೀರಿನ ಮಾದರಿಗಳನ್ನು ಬಳಸಿಕೊಂಡಿದ್ದಾರೆ.
ಈ ಎರಡು ಪ್ರಮುಖ ಸಂಶೋಧನಾ ಸಂಸ್ಥೆಗಳು SARS-CoV-2 ಇರುವಿಕೆಯ ಪರೀಕ್ಷೆಗಾಗಿ ನಗರದ 10 ಕೊಳಚೆ ನೀರಿನ ಸಂಸ್ಕರಣಾ ಘಟಕಗಳು (ಎಸ್‌ಟಿಪಿ) ಮತ್ತು ಗೇಟೆಡ್ ಸಮುದಾಯದಿಂದ ತಮ್ಮ ಅಧ್ಯಯನಕ್ಕಾಗಿ ಮಾದರಿಗಳನ್ನು ಪಡೆದುಕೊಂಡಿರುವುದಾಗಿ ಪ್ರಕಟಿಸಿದವು.
ಸೋಂಕಿತ ವ್ಯಕ್ತಿಯ ಮಲ ಮಾದರಿಗಳಲ್ಲಿ 35 ದಿನಗಳವರೆಗೆ ವೈರಲ್ ವಸ್ತುಗಳನ್ನು ಹೊರ ಚೆಲ್ಲುತ್ತದೆ. ಈ ಒಂದು ತಿಂಗಳಲ್ಲಿ ಅಧ್ಯಯನವು ಪರಿಸ್ಥಿತಿಯ ಒಟ್ಟಾರೆ ಅಂದಾಜು ನೀಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಹೈದರಾಬಾದ್‌ನಲ್ಲಿ ನಿತ್ಯ ಬಳಸಲಾಗುವ 1,800 ಮಿಲಿಯನ್ ಲೀಟರ್ನಷ್ಟು ನೀರಿನಲ್ಲಿ, ಶೇಕಡಾ 40 ರಷ್ಟನ್ನು ವಿವಿಧ ಒಳಚರಂಡಿ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಲಾಗುತ್ತದೆ.
ಈ ಅಧ್ಯಯನಕ್ಕೆ ಹೈದರಾಬಾದ್‌ನಲ್ಲಿರುವ ಸುಮಾರು ಸುಮಾರು 80 ಪ್ರತಿಶತದಷ್ಟು ಕೊಳಚೆನೀರಿನ ಸಂಸ್ಕರಣಾ ಘಟಕಗಳನ್ನು ತೆಗೆದುಕೊಳ್ಳಲಾಗಿದೆ. ಈ ಅಧ್ಯಯನದ ಪ್ರಕಾರ ನಗರದಲ್ಲಿ ಸುಮಾರು 2 ಲಕ್ಷ ಜನರು ಇಂತಹ ವೈರಲ್ ವಸ್ತುಗಳನ್ನು ಹೊರ ಚೆಲ್ಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹೈದರಾಬಾದ್‌ನ ಒಳಚರಂಡಿಯಲ್ಲಿ ಕೇವಲ 40 ಪ್ರತಿಶತದಷ್ಟು ಕೊಳಚೆ ಮಾತ್ರ ಎಸ್‌ಟಿಪಿಗಳನ್ನು ತಲುಪುತ್ತಿರುವುದರಿಂದ, ಈ ಡೇಟಾವನ್ನು ಒಟ್ಟಾರೆ ಹೊರತೆಗೆಯಲು ಬಳಸಬಹುದು. ಆದಾಗ್ಯೂ ನಗರದಲ್ಲಿ ಸೋಂಕಿತ ಜನರ ಸಂಖ್ಯೆ 6 ಲಕ್ಷ ಎಂದು ಅಂದಾಜಿಸಲಾಗಿದೆ. ಇದರಲ್ಲಿ ನಗರವಾಸಿಗಳ ಸಂಖ್ಯೆ ಶೇ. 6. ರಷ್ಟಿದೆ. ರೋಗಲಕ್ಷಣ, ಲಕ್ಷಣ ರಹಿತ ಮತ್ತು ಇತ್ತೀಚೆಗೆ ಚೇತರಿಸಿಕೊಂಡ ವ್ಯಕ್ತಿಗಳೂ ಒಳಗೊಂಡಿದ್ದಾರೆ. ಇದು ತೆಲಂಗಾಣ ಆರೋಗ್ಯ ಇಲಾಖೆ ಘೋಷಿಸಿದ ಪ್ರಕರಣಗಳಿಗಿಂತ ಹೆಚ್ಚೇ ಎಂದು ಹೇಳಲಾಗುತ್ತಿದೆ.
"ನಮ್ಮ ಶೋಧನೆಯ ಬಾಧಿತ ವ್ಯಕ್ತಿಗಳಲ್ಲಿ ಹೆಚ್ಚಿನ ಪ್ರಮಾಣವು ಲಕ್ಷಣರಹಿತವಾಗಿದೆ. ಅಲ್ಲದೇ ಅವರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹಾಗೂ ಮರಣ ಪ್ರಮಾಣವು ಒಂದು ನಿರ್ದಿಷ್ಟ ಸಮಯದಲ್ಲಿತ್ತು. ಆದರೆ ಅಂತಹ ಸೋಂಕಿನ ಪ್ರಮಾಣ ಸದ್ಯ ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂಬ ವೀಕ್ಷಣೆಯೊಂದಿಗೆ ಇದು ಸಹಮತವನ್ನು ಹೊಂದಿದೆ. ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯು ಪರಿಸ್ಥಿತಿಯನ್ನು ಸಮಂಜಸವಾಗಿ ನಿಭಾಯಿಸಲು ಏಕೆ ಸಾಧ್ಯವಾಯಿತು ಎಂದು ಸಹ ಇದರಲ್ಲಿ ವಿವರಿಸಲಾಗಿದೆ ಎಂದು ಸಿಸಿಎಂಬಿ ನಿರ್ದೇಶಕ ಡಾ.ರಾಕೇಶ್ ಮಿಶ್ರಾ ಹೇಳಿದ್ದಾರೆ.
ಈ ಅಧ್ಯಯನವು ನಗರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು, ಸೋಂಕಿನ ದರದ ಚಲನಶೀಲತೆಯನ್ನು ಮೇಲ್ವಿಚಾರಣೆ ಮಾಡಲು ಹಾಗೂ ನಾಗರಿಕ ಸಂಸ್ಥೆಗಳೊಂದಿಗಿನ ಸಮನ್ವಯದಿಂದ ಇಂತಹ ಅಧ್ಯಯನಗಳು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ವ್ಯವಸ್ಥೆಗೆ ಸಹಾಯ ಮಾಡುತ್ತದೆ ಎಂದು ಇದೇ ವೇಳೆ ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.