ನವದೆಹಲಿ: ಲೋಕಸಭೆ ಅಧಿವೇಶನದಲ್ಲಿ ಅಶಿಸ್ತಿನಿಂದ ನಡೆದುಕೊಂಡ ಕಾಂಗ್ರೆಸ್ನ 7 ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಭಾಗ ಮುಗಿಯುವವರೆಗೆ ಸದನ ಪ್ರವೇಶಿಸದಂತೆ ಅಮಾನತು ಮಾಡಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಸದನ ಪ್ರಾರಂಭವಾದಾಗ ಅಧ್ಯಕ್ಷ ಸ್ಥಾನದಲ್ಲಿದ್ದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, ಕಾಂಗ್ರೆಸ್ ಸದಸ್ಯರು ಹಿಂದೆಂದೂ ಸಂಭವಿಸದ ರೀತಿಯಲ್ಲಿ ವರ್ತಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸದನ ಸಭೆ ನಡೆದಾಗ ಮೇಜಿನ ಮೇಲಿದ್ದ ಕಾಗದಗಳನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯರನ್ನು ಹೆಸರಿಸಿದ ಅವರು, ಗೌರವ್ ಗೊಗೊಯ್, ಟಿ.ಎನ್.ಪ್ರತಾಪನ್, ಡೀನ್ ಕುರಿಯಕೋಸ್, ಆರ್. ಉನ್ನಿತಾನ್, ಮಾಣಿಕಮ್ ಠ್ಯಾಗೋರ್, ಬೆನ್ನಿ ಬೆಹ್ನಾನ್ ಮತ್ತು ಗುರ್ಜೀತ್ ಸಿಂಗ್ ಆಜ್ಲಾ ಅಶಿಸ್ತಿನಿಂದ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಬಜೆಟ್ ಅಧಿವೇಶನದ ಉಳಿದ ಅವಧಿಯಿಂದ ಸದಸ್ಯರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದರು. ನಿರ್ಣಯ ಅಂಗೀಕರಿಸಿದ ನಂತರ ಮೀನಾಕ್ಷಿ ಲೇಖಿ ಅವರು ಸದನವನ್ನು ಮುಂದೂಡಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಸದಸ್ಯರು ಅಶಿಸ್ತು ಮತ್ತು ದುರಹಂಕಾರದ ಉತ್ತುಂಗವನ್ನು ತಲುಪಿದ್ದರು. ಕೆಲವು ಕಾಗದದ ಚೂರುಗಳನ್ನು ನೇರವಾಗಿ ಸ್ಪೀಕರ್ ಕುರ್ಚಿಗೆ ಎಸೆದಿದ್ದಾರೆ. ಈ ಘಟನೆ ಖಂಡನೀಯ ಮತ್ತು ಅಕ್ಷಮ್ಯ ಎಂದಿದ್ದಾರೆ.