ಮುಂಬೈ:ಜಮ್ಮುಕಾಶ್ಮೀರದಲ್ಲಿ 370 ವಿಧಿ ರದ್ದತಿ ಬಳಿಕ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕವು 37 ಸಾವಿರ ಅಂಶಗಳಿಗಿಂತಲೂ ಕಡಿಮೆ ಮಟ್ಟಕ್ಕೆ ಇಳಿಕೆ ಕಂಡಿತ್ತು. ಆದರೆ ಇಂದು ಆರಂಭಿಕ ಹಂತದಲ್ಲಿ ಚೇತರಿಕೆ ಕಂಡುಬಂದಿದ್ದು, ಸೆನ್ಸೆಕ್ಸ್ 200ಕ್ಕೂ ಹೆಚ್ಚು ಅಂಶಗಳ ಏರಿಕೆ ಪಡೆದಿದೆ.
370 ಎಫೆಕ್ಟ್: ಚೇತರಿಕೆಯತ್ತ ಮುಂಬೈ ಷೇರುಪೇಟೆ
ಜಮ್ಮುಕಾಶ್ಮೀರಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಯಿಂದ ಕುಸಿತ ಕಂಡಿದ್ದ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕವು ಇಂದು ಆರಂಭಿಕ ವ್ಯವಹಾರದಲ್ಲಿ ಅಲ್ಪ ಚೇತರಿಕೆ ಕಂಡು ಮುನ್ನಡೆಯುತ್ತಿದೆ.
ಸೆನ್ಸೆಕ್ಸ್
ವಿಶೇಷ ಸ್ಥಾನಮಾನ ನೀಡುವ ಸಾಂವಿಧಾನಿಕ ವಿಧಿ ರದ್ದತಿ ಬೆನ್ನಲ್ಲೇ 418.38 ಅಂಶ ಇಳಿಕೆ ಕಂಡು 36,699.84ರಲ್ಲಿ ಸೋಮವಾರದ ವಹಿವಾಟು ಅಂತ್ಯಗೊಂಡಿತ್ತು.
ಆದರೆ ಇಂದು ಬ್ಯಾಂಕಿಂಗ್, ಆಟೋ ಮತ್ತು ಮೆಟಲ್ ಷೇರುಗಳ ಖರೀದಿಯ ಮಧ್ಯೆಯೂ ದೇಶೀಯ ಷೇರು ಮಾರುಕಟ್ಟೆಗಳು ಉತ್ತಮ ಆರಂಭ ಪಡೆದವು. ಆರಂಭಿಕ ವಹಿವಾಟಿನಲ್ಲಿ ಎಸ್&ಪಿ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 233.29 ಪಾಯಿಂಟ್ಸ್ ಏರಿಕೆಯಾಗಿ 36,933.13ಕ್ಕೆ ತಲುಪಿದೆ. ಸಮಗ್ರ ಎನ್ಎಸ್ಇ ನಿಫ್ಟಿ ಸೂಚ್ಯಂಕ 10,900 ಅಂಶಗಳಿಗೆ ತಲುಪಿದೆ. ಈ ಹಿಂದಿನ ಮುಕ್ತಾಯ ಹಂತಕ್ಕಿಂತ 76.05 ಪಾಯಿಂಟ್ಸ್ ಹೆಚ್ಚಳ ಆದಂತಾಗಿದೆ.