ನವದೆಹಲಿ:ಮುಂಬೈ ಮಾರುಕಟ್ಟೆಯಲ್ಲಿ ಇಂದು ಏಕಾಏಕಿ ಇಳಿಕೆ ಕಂಡು ಬಂದಿರುವ ಪರಿಣಾಮ ಬರೋಬ್ಬರಿ 1,115 ಅಂಕಗಳಷ್ಟು ಕುಸಿತಗೊಂಡಿದ್ದು, ನಿಫ್ಟಿಯಲ್ಲೂ 326.30 ಅಂಕ ಕಡಿಮೆಯಾಗಿದೆ. ಹೀಗಾಗಿ ಅನೇಕ ಹೂಡಿಕೆದಾರರು ನಷ್ಟ ಅನುಭವಿಸಿದ್ದು, ಬರೋಬ್ಬರಿ 3.91 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬಿಎಸ್ಇ ಸೂಚ್ಯಂಕ 1,100 ಪಾಯಿಂಟ್ ಕುಸಿತದೊಂದಿಗೆ 36,553.60 ತಲುಪಿದ್ದು, ಎನ್ಎಸ್ಇ ಸೂಚ್ಯಂಕ 326 ಕುಸಿತದೊಂದಿಗೆ 10,805.55 ತಲುಪಿದೆ.
ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಸಲ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೂಚ್ಯಂಕ ಕುಸಿತಗೊಂಡಿದ್ದು, ಐಟಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೊಡೆತ ಉಂಟಾಗಿದೆ. ಇನ್ನು ಇನ್ಫೋಸಿಸ್ ಕಂಪನಿ ಷೇರುಗಳಲ್ಲೂ 44 ರೂ ಕುಸಿತಗೊಂಡಿದ್ದು, ಟಿಸಿಎಸ್ 135, ಐಸಿಐಸಿಐ ಬ್ಯಾಂಕ್ 16 ರೂ ಹಾಗೂ ಹೆಚ್ಡಿಎಫ್ಸಿ 35 ರೂ ಮೌಲ್ಯ ಕಳೆದುಕೊಂಡಿವೆ.
ರಾತ್ರಿಯಿಡಿ ಅಮೆರಿಕ ಷೇರುಗಳ ಕುಸಿತ ಹಾಗೂ ಯುರೋಪಿಯನ್ ನಗರಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಮರುಕಳಿಸುತ್ತಿರುವುದರಿಂದ ಗುರುವಾರದ ವಹಿವಾಟಿನಂದು ದೇಶೀಯ ಈಕ್ವಿಟಿ ಮಾನದಂಡ ಸೂಚ್ಯಂಕಗಳು ಶೇ 3ರಷ್ಟು ಕುಸಿತ ದಾಖಲಿಸಿದವು.
ಮಾರುಕಟ್ಟೆಯ ಮೌಲ್ಯಕ್ಕಿಂತ ಅಮೆರಿಕದ ಆರ್ಥಿಕತೆಯು ತೀರಾ ಕೆಟ್ಟದಾಗಿದೆ ಎಂದು ಹಲವು ಫೆಡ್ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಅಮೆರಿಕದ ಷೇರುಗಳು ದರದಲ್ಲಿ ಬಿರುಕು ಕಾಣಿಸಿಕೊಂಡಿತು. ಮತ್ತೊಂದೆಡೆ, ವೈರಸ್ ಹಾಟ್‌ಸ್ಪಾಟ್‌ಗಳಾಗಿದ್ದ ಇಂಗ್ಲೆಂಡ್, ಫ್ರಾನ್ಸ್, ಸ್ಪೇನ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ ಇತರೆ ಯುರೋಪಿಯನ್ ರಾಷ್ಟ್ರಗಳಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದ್ದು, ವ್ಯವಹಾರಗಳ ಮೇಲೆ ಹೊಸ ನಿರ್ಬಂಧಗಳಿಗೆ ಕಾರಣವಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಉಂಟಾಗಿದೆ. ತತ್ಪರಿಣಾಮವಾಗಿ ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡಕ್ಕೆ ಸೂಚ್ಯಂಕಗಳು ಇಳಿಮುಖವಾಗಿವೆ. ಹಾಂ ಕಾಂಗ್‌ನ ಹ್ಯಾಂಗ್ ಸೆಂಗ್ ಶೇ 1.82ರಷ್ಟು, ಸಿಯೋಲ್‌ನ ಕೋಸ್ಪಿ ಶೇ 2.59ರಷ್ಟು ಮತ್ತು ಜಪಾನ್‌ನ ನಿಕ್ಕಿ ಶೇ 1.11ರಷ್ಟು ಕುಸಿದಿವೆ.
ಅಮೆರಿಕದ ವಾಲ್ ಸ್ಟ್ರೀಟ್‌ನಲ್ಲಿ ರಾತ್ರಿಯಿಡೀ ಪೇಟೆಯ ಕುಸಿತದ ಪ್ರಭಾವವು ಏಷ್ಯಾದ ಮಾರುಕಟ್ಟೆಗಳ ಮೇಲೂ ಬೀರಿದೆ. ಇದಕ್ಕೆ ಭಾರತೀಯ ಮಾರುಕಟ್ಟೆ ಹೊರತಾಗಿಲ್ಲ. ಆರ್ಥಿಕ ಚೇತರಿಕೆಯ ಸ್ಥಿರತೆಯ ಬಗ್ಗೆ ಅಮೆರಿಕ ಫೆಡರಲ್ ರಿಸರ್ವ್ ಅಧಿಕಾರಿಗಳ ಸರಣಿ ಎಚ್ಚರಿಕೆಗಳು ಹೂಡಿಕೆದಾರರನ್ನು ತಲ್ಲಣಗೊಳಿಸಿವೆ