ಮುಂಬೈ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದರ ಮಧ್ಯೆ ಮುಂಬೈ ಮಾರುಕಟ್ಟೆಯಲ್ಲೂ ಕರಡಿ ಕುಣಿತದ ಅಬ್ಬರ ಜೋರಾಗಿದೆ. ಇಂದು ಬೆಳಗ್ಗಿನ ಆರಂಭಿಕ ವ್ಯವಹಾರದಲ್ಲಿ ಪೇಟೆ ಬರೋಬ್ಬರಿ 1,293 ಅಂಕ ಕುಸಿತ ಕಂಡಿದೆ.
ಮುಂಬೈ ಷೇರುಪೇಟೆಯಲ್ಲಿ ಕರಡಿ ಕುಣಿತ, ಬರೋಬ್ಬರಿ 1,293 ಅಂಕಗಳ ಕುಸಿತ
ಮುಂಬೈ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲೇ ಕರಡಿ ಕುಣಿತ ಜೋರಾಗಿದ್ದು, ಸೆನ್ಸೆಕ್ಸ್ ಬರೋಬ್ಬರಿ 1,293 ಅಂಕ ಕಳೆದುಕೊಂಡಿದೆ.
ಮುಂಬೈ ಷೇರು ಪೇಟೆ ಆರಂಭಗೊಳ್ಳುತ್ತಿದ್ದಂತೆ ಇಷ್ಟೊಂದು ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಮೂಲಕ ಏರುಮುಖದತ್ತ ಮುಖ ಮಾಡಿದ್ದ ಮುಂಬೈ ಪೇಟೆ 32,423.80 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಇನ್ನು ನಿಫ್ಟಿಯಲ್ಲೂ 407 ಅಂಕ ಕಡಿತಗೊಂಡು 9,452.85 ಅಂಕಗಳಿಗೆ ತಲುಪಿ, ವಹಿವಾಟು ಮುಂದುವರೆಸಿದೆ.
ಜಾಗತಿಕ ಸೂಚ್ಯಂಕ ಹಾಗೂ ಯುಎಸ್-ಚೀನಾ ನಡುವಿನ ಬಿಕ್ಕಟ್ಟು ಈ ಇಳಿಕೆಗೆ ಕಾರಣವಾಗಿದ್ದು, ಹೂಡಿಕೆದಾರರು ಮುಂದೆ ಬಾರದೇ ಇರುವುದು ಷೇರು ಪೇಟೆಯ ಇಳಿಕೆಗೆ ಕಾರಣವಾಗಿದೆ. ಇಂದಿನ ವ್ಯವಹಾರದಲ್ಲಿ ದಿಢೀರ್ ಇಳಿಕೆ ಕಂಡು ಬಂದಿರುವುದು ರಿಲಯನ್ಸ್ ಇಂಡಸ್ಟ್ರೀಯ ಷೇರುಗಳಲ್ಲಿ. ಉಳಿದಂತೆ ಐಸಿಸಿ ಬ್ಯಾಂಕ್, ಟಾಟಾ ಸ್ಟೀಲ್ಸ್ ಷೇರುಗಳ ಬೆಲೆ ಇಳಿಕೆಯಾಗಿವೆ.