ಅಯೋಧ್ಯೆ(ಉತ್ತರ ಪ್ರದೇಶ):ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿತ ಮಹತ್ವದ ವಿಚಾರಣೆ ಇದೇ 17ರಂದು ಮುಕ್ತಾಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ದಸರಾ ಹಬ್ಬ ಮುಕ್ತಾಯವಾಗುತ್ತಿದ್ದಂತೆ ಸುಪ್ರೀಂಕೋರ್ಟ್ನಲ್ಲಿ ಕೊನೆಯ ಹಂತದ ವಿಚಾರಣೆ ನಡೆಯಲಿದೆ. ಈ ಮೊದಲು ಅಕ್ಬೋಬರ್ 18ರಂದು ವಿಚಾರಣೆ ಮುಕ್ತಾಯವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದರು. ಆದರೆ ಅಯೋಧ್ಯೆ ವಿಚಾರಣೆ ನಿಗದಿಗೂ ಒಂದು ದಿನ ಮುಂಚಿತವಾಗಿ ಮುಗಿಯಲಿದೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿದೆ.
ಅಯೋಧ್ಯೆ ಮೇಲಿನ ಹಿಂದೂಗಳ ನಂಬಿಕೆ ಪ್ರಶ್ನಿಸುವುದು ಸುಪ್ರೀಂಕೋರ್ಟ್ಗೂ ಕಷ್ಟವಂತೆ!!
ಅಕ್ಬೋಬರ್17ರಂದು ಅಂತಿಮ ವಿಚಾರಣೆ:
ದಶಕಗಳ ಕಾಲ ವಿವಾದಕ್ಕೆ ಗುರಿಯಾಗಿ, ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲೇ ಇದ್ದ ಅಯೋಧ್ಯೆ ಭೂವಿವಾದ ತೀರ್ಪಿನ ಹಂತ ತಲುಪಿದೆ.
ಅ.4ರಂದು ನಡೆದ 37 ದಿನದ ನಿತ್ಯ ವಿಚಾರಣೆ ವೇಳೆ ಅ.17ರಂದೇ ಅಂದರೆ ಈ ಹಿಂದಿನ ದಿನಾಂಕಕ್ಕೂ ಒಂದು ದಿನ ಮುಂಚಿತವಾಗಿ ವಿಚಾರಣೆ ಮುಗಿಯಲಿದೆ ಎಂದು ಮುಖ್ಯ ನ್ಯಾ. ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿತ್ತು.
ಸುಪ್ರೀಂನಲ್ಲಿ ಅಯೋಧ್ಯೆ ವಿಚಾರಣೆ: ರಘುವಂಶಸ್ಥರ ಬಗೆಗಿನ ಪ್ರಶ್ನೆಗೆ ಅಡ್ವೋಕೇಟ್ ತಬ್ಬಿಬ್ಬು..!
ಮುಖ್ಯ ನ್ಯಾ. ರಂಜನ್ ಗೊಗೊಯಿ ನೇತೃತ್ವದ ಪೀಠದಲ್ಲಿ ಎಸ್.ಎ. ಬೋಪ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಅಬ್ದುಲ್ ನಜೀರ್ ಪೀಠದ ಸದಸ್ಯರಾಗಿದ್ದಾರೆ.
ಮಧ್ಯಸ್ಥಿಕೆ ವಿಫಲ:
ಅಯೋಧ್ಯೆ ವಿವಾದ ಸುಪ್ರೀಂಕೋರ್ಟ್ನಲ್ಲಿ ಬಗೆಹರಿಸುವುದು ಅಸಾಧ್ಯ ಎಂದು ಪರಿಗಣಿಸಿ ಮಧ್ಯಸ್ಥಿಕೆ ತಂಡವನ್ನು ನೇಮಿಸಿ ಪ್ರಕರಣವನ್ನು ಆ ತಂಡಕ್ಕೆ ಹಸ್ತಾಂತರ ಮಾಡಿತ್ತು.
ಸುಪ್ರೀಂನ ಮಾಜಿ ನ್ಯಾಯಮೂರ್ತಿ ಎಫ್.ಎಂ.ಈ. ಖಲೀಫುಲ್ಲಾ, ಧಾರ್ಮಿಕ ಗುರು ರವಿಶಂಕರ್ ಗುರೂಜಿ ಹಾಗೂ ಹಿರಿಯ ಕಾನೂನು ತಜ್ಞ ಶ್ರೀರಾಮ್ ಪಂಚು ಅವರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿ ಅಯೋಧ್ಯೆ ವಿವಾದಕ್ಕೆ ಕೊನೆಹಾಡಲು ಸರ್ವಪ್ರಯತ್ನ ಮಾಡಿತ್ತು.
ಮಧ್ಯಸ್ಥಿಕೆಯನ್ನು ಎಂಟು ವಾರದಲ್ಲಿ ಕೊನೆಗೊಳಿಸಿ ವರದಿ ಸಲ್ಲಿಸಲು ಸಮಿತಿಗೆ ಸುಪ್ರೀಂ ಸೂಚಿಸಿತ್ತು. ಆದರೆ ಸಲ್ಲಿಕೆಯಾದ ವರದಿಯಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಲು ಮಧ್ಯಸ್ಥಿಕೆ ಸಮಿತಿ ವಿಫಲವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದರು.
ಆಗಸ್ಟ್ 6ರಿಂದ ನಿತ್ಯ ವಿಚಾರಣೆ:
ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಪ್ರಕರಣವನ್ನು ಕೈಗೆತ್ತಿಕೊಂಡ ಕೋರ್ಟ್ ಆಗಸ್ಟ್ 6ರಿಂದ ನಿತ್ಯ ವಿಚಾರಣೆ ಆರಂಭಿಸಿತ್ತು. ನಿತ್ಯ ವಿಚಾರಣೆ ನಡೆಸಿ ವಿವಾದವನ್ನು ಅಂತ್ಯಗೊಳಿಸುವುದಾಗಿ ಸುಪ್ರೀಂ ಹೇಳಿತ್ತು.
ಹಿಂದೂ ಮಹಾಸಭಾ, ಸುನ್ನಿ ವಕ್ಫ್ ಬೋರ್ಡ್ ಹಾಗೂ ನಿರ್ಮೋಹಿ ಅಖಾರ 2.77 ಎಕರೆ ವಿಸ್ತೀರ್ಣದ ಜಾಗಕ್ಕೆ ತಮ್ಮ ವಾದ ಮಂಡಿಸುತ್ತಿದ್ದಾರೆ. ಈಗಾಗಲೇ 37 ದಿನಗಳ ವಿಚಾರಣೆ ನಡೆಸಿರುವ ಕೋರ್ಟ್ ಅಕ್ಟೋಬರ್ 17ರಂದು ವಿಚಾರಣೆ ಕೊನೆಗೊಳಿಸಲಿದೆ.
ಇನ್ನೊಂದೆಡೆ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಕಾರ್ಯಾವಧಿ ನವೆಂಬರ್ 17ರಂದು ಮುಕ್ತಾಯವಾಗಲಿದೆ.