ನವದೆಹಲಿ :ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಯಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ಗೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದೀಗ ಪ್ರತಿಪಕ್ಷಗಳು ಟೀಕೆಗೆ ಗುರಿಮಾಡಿವೆ.
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮಾಯಾವತಿ ಪ್ರಧಾನಿ ವಿರುದ್ಧ ಗುಡುಗಿದ್ದು, ದೇಶದ ಜನರ ಅನುಮತಿ ಪಡೆದ ನಂತರವಷ್ಟೇ ಪಾಕ್ ಪ್ರಧಾನಿಗೆ ಸಂದೇಶ ಕಳುಹಿಸಬೇಕಿತ್ತು ಎಂದಿದ್ದಾರೆ.
ಒಂದು ಕಡೆ ಸಾರ್ವಜನಿಕ ವೇದಿಕೆಗಳ ಮೇಲೆ ಪಾಕ್ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಮತ್ತೊಂದೆಡೆ ಅಲ್ಲಿನ ಪ್ರಧಾನಿಗೆ ರಹಸ್ಯವಾಗಿ ಶುಭ ಕೋರುತ್ತಾರೆ. ದೇಶದ 130 ಕೋಟಿ ಜನರ ಭಾವನೆ ಜತೆ ಆಟವಾಡುತ್ತಿರುವ ಪ್ರಧಾನಿ ಮೋದಿ ಅವರೇ, ನಿಮಗಿದು ಸರಿ ಎನಿಸುತ್ತದೆಯೇ? ಜನರು ದಯಮಾಡಿ ಎಚ್ಚೆತ್ತುಕೊಳ್ಳಿ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, ಮಾಯಾವತಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.
ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಸಹ ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದು, ಚೌಕೀದಾರರು ಪಾಕ್ ರಾಷ್ಟ್ರೀಯ ದಿನಕ್ಕೆ ಉಗ್ರವಾದದ ಬಗ್ಗೆ ಚಕಾರ ಎತ್ತದೇ ಅಲ್ಲಿನ ಪ್ರಧಾನಿಗೆ ಶುಭ ಕೋರಿದ್ದನ್ನು ಮುಚ್ಚಿಟ್ಟಿದ್ದಾರೆ. ತೋಳ್ಬಲದ ನಾಟಕ ಮಾಧ್ಯಮಗಳು ಹಾಗೂ ಜನರ ಎದುರಿಗೆ ಮಾತ್ರ ಎಂದು ಟ್ವಿಟ್ಟರ್ನಲ್ಲಿ ಕುಟುಕಿದ್ದಾರೆ. ಪಾಕ್‌ನ ರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ತಮಗೆ ಶುಭಕೋರಿದ್ದನ್ನ ಪಾಕ್ ಪಿಎಂ ಇಮ್ರಾನ್ ಖಾನ್ ತಮ್ಮ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದರು.