ಸತ್ನಾ ( ಮಧ್ಯಪ್ರದೇಶ ): ಬಿಹಾರಕ್ಕೆ ತೆರಳುತ್ತಿದ್ದ ವಿಶೇಷ ರೈಲಿನಲ್ಲಿ ಆಹಾರ ಪ್ಯಾಕೆಟ್ಗಾಗಿ ವಲಸೆ ಕಾರ್ಮಿಕರು ಹೊಡೆದಾಡಿಕೊಂಡ ಘಟನೆ ಮಧ್ಯಪ್ರದೇಶದ ಸತ್ನಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಧ್ಯಾಹ್ನ 1:30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕೋಚ್ ಒಳಗಡೆ ಕಾರ್ಮಿಕರು ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಭದ್ರತಾ ದಳ (ಆರ್ಪಿಎಫ್ )ದ ಸ್ಟೇಷನ್ ಉಸ್ತುವಾರಿ ಮನ್ ಸಿಂಗ್, ಆಹಾರ ಪ್ಯಾಕೆಟ್ಗಾಗಿ ಜಗಳ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ, ಈ ಬಗ್ಗೆ ಯಾರೂ ದೂರು ದಾಖಲಿಸಿಲ್ಲ. ಕೋಚ್ ಒಳಗಡೆ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವ ವಿಡಿಯೋ ದೊರೆತಿದೆ. ಕೆಲವರು ಬೆಲ್ಟ್ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಅಲ್ಲದೆ ಯಾರೂ ಮಾಸ್ಕ್ ಧರಿಸಿರಿಲ್ಲ. ಎರಡು ಗಂಟೆ ಸುಮಾರಿಗೆ ರೈಲು ಸತ್ನಾ ನಿಲ್ದಾಣದಿಂದ ಹೊರಟಿದೆ. ರೈಲು ನಿಲ್ದಾಣಕ್ಕೆ ತಲುಪಿದ ಬಳಿಕ ಹತ್ತು ನಿಮಿಗಳ ಕಾಲ ಕಾರ್ಮಿಕರು ಹೊಡೆದಾಡಿಕೊಂಡಿರುವ ಬಗ್ಗೆ ಮಾಹಿತಿಯಿದೆ. ಫ್ಲಾಟ್ ಫಾರ್ಮ್ನಲ್ಲಿದ್ದ ಪೊಲೀಸ್ ಸಿಬ್ಬಂದಿ ಹೊರಗಿನಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕೋಚ್‌ನತ್ತ ಯಾರೂ ಹೋಗಿಲ್ಲ ಎಂದಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದ 1,200 ವಲಸೆ ಕಾರ್ಮಿಕರನ್ನು ಹೊತ್ತು ಮುಂಬೈನ ಕಲ್ಯಾಣ್ನಿಂದ ಹೊರಟ ರೈಲು ಬಿಹಾರಕ್ಕೆ ತೆರಳಿದೆ.