ಬೆಂಗಳೂರು:ಮಧ್ಯಪ್ರದೇಶದ ರೆಬೆಲ್ ಶಾಸಕರನ್ನು ಭೇಟಿಯಾಗಲು ಬಂದಿದ್ದ ಅಲ್ಲಿನ ಕಾಂಗ್ರೆಸ್ ಮುಖಂಡ ಜೀತು ಪಟ್ವಾರಿ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.
ಕಾಂಗ್ರೆಸ್ ಮುಖಂಡ ಜೀತು ಪಟ್ವಾರಿ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಂಡಾಯ ಶಾಸಕರನ್ನ ಭೇಟಿ ಮಾಡಲು ಸಚಿವ ಜೀತು ಪಟ್ವಾರಿ ಬೆಂಗಳೂರು ಉತ್ತರ ತಾಲೂಕಿನ ಸಾದಹಳ್ಳಿ ಬಳಿಯ ಖಾಸಗಿ ರೆಸಾರ್ಟ್ಗೆ ಬಂದಿದ್ದರು.
ಸ್ಥಳದಲ್ಲಿಯೇ ಇದ್ದ ಚಿಕ್ಕಜಾಲ ಪೊಲೀಸರು, ಜೀತು ಪಟ್ವಾರಿ ಅವರನ್ನು ತಡೆಯಲು ಮುಂದ್ದಾಗಿದ್ದಾರೆ. ಈ ವೇಳೆ ಜೀತು ಪಾಟ್ವರಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಚಿಕ್ಕಜಾಲ ಪೊಲೀಸರು, ಪಟ್ವಾರಿ ಸೇರಿದಂತೆ 10 ಕಾಂಗ್ರೆಸ್ ಮುಖಂಡರನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದ್ದಾರೆ. ಸದ್ಯ ಜೀತು ಪಟ್ವಾರಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿದ್ದಾರೆ.
ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು, ನಮ್ಮ ಇಬ್ಬರು ಸಚಿವರಾದ ಜೀತು ಪಟ್ವಾರಿ ಮತ್ತು ಲಖನ್ ಸಿಂಗ್ ಬೆಂಗಳೂರಿಗೆ ಹೋಗಿದ್ದರು. ಅವರ ಮೇಲೆ ಹಲ್ಲೆ ನಡೆಸಿ ಬಂಧಿಸಲಾಗಿದೆ ಎಂಬ ಮಾಹಿತಿ ನಮ್ಮಲ್ಲಿದೆ. ಪೊಲೀಸರು ಸರಿಯಾದ ಕ್ರಮ ಕೈಗೊಂಡು ನಮ್ಮ ಮಂತ್ರಿಗಳು ಮತ್ತು ಶಾಸಕರನ್ನು ಬಿಡುಗಡೆ ಮಾಡದಿದ್ದರೆ, ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ.