ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಭೇಟಿಗಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ತೆರಳಿದ್ದಾರೆ. ಸೆ. 4ರಂದು ನಡೆಯುವ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆಯಲ್ಲಿ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಸಂಘಟನೆಯ ಎರಡು ಪ್ರಬಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ತೀವ್ರಗೊಳ್ಳುತ್ತಿರುವ ಈ ಸಮಯದಲ್ಲಿ ಶಾಂಘೈ ಸಭೆ ಭಾರೀ ಮಹತ್ವ ಪಡೆದಿದೆ.
ಎಸ್ಸಿಒ ರಕ್ಷಣಾ ಸಚಿವರ ಸಭೆಗೂ ಮುನ್ನ ರಾಜನಾಥ್ ಸಿಂಗ್ ರಷ್ಯಾ ರಕ್ಷಣಾ ಸಚಿವ ಸರ್ಗೈ ಶೊಯ್ಗು ಮತ್ತು ಅಲ್ಲಿನ ಸೇನೆಯ ಉನ್ನತಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಶಸ್ತ್ರಾಸ್ತ್ರ ಖರೀದಿ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸುವ ಉದ್ದೇಶವನ್ನು ರಾಜನಾಥ್ ಸಿಂಗ್ ಹೊಂದಿದ್ದು, ಹೀಗಾಗಿ ಸೇನೆಯ ಉನ್ನತಾಧಿಕಾರಿಗಳನ್ನೂ ಭೇಟಿಯಾಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆ. 5ರಂದು ರಾಜನಾಥ್ ಸಿಂಗ್ ಮಾಸ್ಕೋದಿಂದ ಸ್ವದೇಶಕ್ಕೆ ಆಗಮಿಸಲಿದ್ದಾರೆ.
ಚೀನಾದ ರಕ್ಷಣಾ ಸಚಿವ ಜನರಲ್ ವಿ. ಫೆಂಗೆ ಕೂಡ ಎಸ್ಸಿಒ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ರಷ್ಯಾದಲ್ಲಿ ನಡೆಯಲಿರುವ ಬಹುರಾಷ್ಟ್ರಗಳ ಸಮರಾಭ್ಯಾಸದಿಂದ ಭಾರತ ಹಿಂದೆ ಸರಿದ ಕೆಲವೇ ದಿನಗಳ ನಂತರ ರಕ್ಷಣಾ ಸಚಿವರ ಸಭೆ ನಡೆಯುತ್ತಿದೆ. ಈ ಸಮರಾಭ್ಯಾಸದಲ್ಲಿ ಚೀನಾ ಮತ್ತು ಪಾಕಿಸ್ತಾದ ಸೇನೆಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.