ಹೈದರಾಬಾದ್: ಕೋವಿಡ್-19 ವೈರಸ್ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ. ಇದಕ್ಕಾಗಿ ವ್ಯಾಕ್ಸಿನ್, ಔಷಧಿ ಕಂಡು ಹಿಡಿಯಲು ಜಗತ್ತಿನಾದ್ಯಂತ ಸಾವಿರಾರು ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಅದ್ಭುತ ಸಂಶೋಧನೆಯೊಂದು ನಡೆದಿರುವುದಾಗಿ ವರದಿಯಾಗಿದೆ. ಮಾನವ ಜೀವಕೋಶಗಳಿಗೆ ಕೋವಿಡ್ ವೈರಸ್ ದಾಳಿ ಮಾಡದಂತೆ ತಡೆಯುವ ಆ್ಯಂಟಿಬಾಡಿಯನ್ನು (ಪ್ರತಿಕಾಯ) ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಮಾನವನ ಆರೋಗ್ಯವಂತ ಜೀವಕೋಶಗಳಿಗೆ ವೈರಸ್ ದಾಳಿ ಮಾಡದಂತೆ ತಡೆಯುವ ಸಂಪೂರ್ಣ ಮಾನವ ಮೊನೊಕ್ಲೋನಲ್ ಆ್ಯಂಟಿಬಾಡಿ ಇದಾಗಿದೆ ಎಂದು ಎರಾಸ್ಮಸ್ ಮೆಡಿಕಲ್ ಸೆಂಟರ್ ಮತ್ತು ಹಾರ್ಬರ್ ಬಯೊಮೆಡ್ ಉಟ್ರೆಕ್ಟ್ ವಿವಿಯ ವಿಜ್ಞಾನಿಗಳು ಹೇಳಿದ್ದಾರೆ.
ಈಗ ಅಭಿವೃದ್ಧಿಪಡಿಸಲಾದ ಸಂಪೂರ್ಣ ಮಾನವ ಆ್ಯಂಟಿಬಾಡಿ ಸಾಂಪ್ರದಾಯಿಕ ಆ್ಯಂಟಿಬಾಡಿಗಳಿಗಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಬೇರೊಂದು ಪ್ರಾಣಿಯ ದೇಹದಲ್ಲಿ ಆ್ಯಂಟಿಬಾಡಿಗಳನ್ನು ಬೆಳೆಸಿ ನಂತರ ಅದನ್ನು ಮನುಷ್ಯನ ಶರೀರದೊಳಗೆ ಸೇರಿಸಲಾಗುತ್ತದೆ. ಆದರೆ, ಈ ಮೊನೊಕ್ಲೋನಲ್ ಆ್ಯಂಟಿಬಾಡಿಯನ್ನು ಮಾನವನ ದೇಹದಲ್ಲೇ ವಿಕಸನಗೊಳಿಸಲಾಗಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎನ್ನಲಾಗಿದೆ.