ಬರೇಲಿ (ಉತ್ತರಪ್ರದೇಶ):ಉತ್ತರಪ್ರದೇಶದ ಖಾಸಗಿ ಶಾಲೆ ಮಹಿಳಾ ಪ್ರಿನ್ಸಿಪಾಲ್ ವೊಬ್ಬರು ತಮ್ಮ ಬಂಗಾರದ ಬಳೆ ಮಾರಿ ಬಂದ ಹಣವನ್ನ ಸಿಆರ್ ಪಿಎಫ್ ಹುತಾತ್ಮ ಯೋಧರ ಪತ್ನಿಯರಿಗೆ ನೀಡಿ ದೇಶಪ್ರೇಮ ಮೆರೆದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಪುಲ್ವಾಮಾ ಉಗ್ರರ ದಾಳಿಯಲ್ಲಿ 44ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಸೈನಿಕರ ಕುಟುಂಬವಷ್ಟೇ ಅಲ್ಲ, ಇಡೀ ದೇಶ ಯೋಧರ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟಿತ್ತು. ಸೈನಿಕರ ಕುಟುಂಬಗಳ ಬೆಂಬಲಕ್ಕೆ ಇಡೀ ದೇಶವೇ ನಿಂತಿದೆ. ದೇಶ- ವಿದೇಶಗಳಿಂದಲೂ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ.
3 ದಶಕದಲ್ಲೇ ಅತ್ಯಂತ ಘನಘೋರ ಉಗ್ರರ ದಾಳಿಯ ಸುದ್ದಿ ಪ್ರಸಾರವಾದಾಗಿನಿಂದ ಪ್ರತಿಯೊಬ್ಬರ ಹೃದಯ ಯೋಧರಿಗಾಗಿ ಮರುಗಿದೆ. ದೇಶಕ್ಕಾಗಿ ಬಲದಾನ ಮಾಡಿದ ವೀರ ಬಗೆಗೆ ಹೆಮ್ಮೆಯೂ ಪ್ರತಿಯೊಬ್ಬರಿಗೂ ಇದೆ.
ಯೋಧರ ಹೆಮ್ಮೆಯ ಕುಟುಂಬಗಳ ಕಣ್ಣೀರ ಕಥೆಗಳಿಗೆ ಎಲ್ಲರ ಮನಕರಗಿದೆ. ಈ ಹಿಂದೆ ದೇಶ ಯಾವಾಗಲೂ ಈ ರೀತಿ ಹುತಾತ್ಮರ ಕುಟುಂಬಗಳ ಜತೆಗೆ ಕಲ್ಲುಬಂಡೆ ರೀತಿ ನಿಂತ್ಕೊಂಡಿರಲಿಲ್ಲ. ಅಷ್ಟರಮಟ್ಟಿಗೆ ದೇಶ ಪುಲ್ವಾಮಾ ದಾಳಿ ಬಳಿಕ ದೇಶ ಐಕ್ಯತೆ ತೋರಿದೆ. ನೆರವು ನೀಡುವವರ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿದೆ. ಈಗ ಉತ್ತರಪ್ರದೇಶದ ಬರೇಲಿಯ ಖಾಸಗಿ ಶಾಲೆ ಪ್ರಿನ್ಸಿಪಾಲ್, ಕಿರಣ್ ಜಾಗವಾಲ್ ಎಂಬುವರು ಹುತಾತ್ಮ ಯೋಧರ ಪತ್ನಿಯರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.
'ಪತ್ನಿಯರೂ ತಮ್ಮ ಪತಿಯ ಪಾರ್ಥಿವ ಶರೀರದ ಮುಂದೆ ಕಣ್ಣೀರು ಸುರಿಸುವುದನ್ನ ನೋಡಿ ಪ್ರಿನ್ಸಿಪಾಲಾಗಿರುವ ಕಿರಣ್‌ರ ಹೃದಯ ಒಡೆದಂತಾಗಿದೆ. ಮಡಿದಿಯರ ಕಣ್ಣೀರು ಕಂಡು ಭಾವೋದ್ವೇಗಕ್ಕೊಳಗಾಗಿದ್ದಾರೆ. ಆದೃಶ್ಯ ಕಂಡು ತಡೆಯಲಾಗದೇ ಅತ್ತೇ ಬಿಟ್ಟಿದ್ದಾರೆ.
'ನನ್ನ ತಂದೆ ನನಗೆ ವರ್ಷಗಳ ಹಿಂದೆ ಬಂಗಾರದ ಬಳೆಗಳನ್ನ ಉಡುಗೊರೆಯಾಗಿ ಕೊಟ್ಟಿದ್ದರು. ಅದೇ ಬಳೆಗಳನ್ನ ಮಾರಿಬಿಟ್ಟೆನು.ಅದರಿಂದ ಬಂದ ಒಂದೂವರೆ ಲಕ್ಷ (1.5) ರೂ. ಪ್ರಧಾನಿ ಪರಿಹಾರ ನಿಧಿಗೆ ನೀಡಿದೆ. ಯೋಧರ ಪತ್ನಿಯರ ಕಂಡು ಅವರಿಗಾಗಿ ಏನು ಮಾಡಬಹುದು ಎಂದು ಯೋಚಿಸಿದೆ. ಆಗ ಬಂಗಾರದ ಬಳೆ ಮಾರಿ ಅದೇ ಹಣ ಯೋಧರ ಮಡದಿಯರಿಗೆ ನೀಡಲು ನಿರ್ಧರಿಸಿದೆ. ಹೀಗೆ ಪ್ರತಿಯೊಬ್ಬರೂ ಯೋಧರ ಕುಟುಂಬಗಳ ನೆರವಿಗೆ ಮುಂದಾಗಬೇಕು. ನಮ್ಮ ದೇಶದಲ್ಲಿ 130 ಕೋಟಿ ಜನರಿದ್ದೇವೆ. ಪ್ರತಿಯೊಬ್ಬ ಒಂದು ರೂ. ನೀಡಿದರೂ ಬಹಳಷ್ಟು ಹಣ ಸಂಗ್ರಹವಾಗುತ್ತೆ.
ಯೋಧರ ಸಾವಿನ ದುಃಖ, ಸಂಕಷ್ಟದಲ್ಲಿರುವ ಅವರ ಕುಟುಂಬಗಳ ಜತೆಗೆ ಇಡೀ ದೇಶವೇ ಒಂದಾಗಿ ಬೆಂಬಲಕ್ಕೆ ನಿಂತಿರುವುದನ್ನ ನೋಡಲು ತುಂಬಾ ಹೆಮ್ಮೆ ಎನಿಸುತ್ತಿದೆ. ದೇಶಕ್ಕೆ ಪ್ರಾಣ ಕೊಟ್ಟವರ ಫ್ಯಾಮಿಲಿಗಳ ಜತೆಗೆ ನಿಸ್ವಾರ್ಥವಾಗಿ ಒಂದಿಷ್ಟು ಒಳ್ಳೇ ನೆರವು ನೀಡುವುದು ಈಗ ಅವಶ್ಯ' ಅಂತಾ ಪ್ರಿನ್ಸಿಪಾಲ್ ಕಿರಣ್ ಅಭಿಪ್ರಾಯಪಟ್ಟಿದ್ದಾರೆ.
ಅಪ್ಪ ಮಗಳಿಗೆ ಪ್ರೀತಿಯಿಂದಲೇ ತಮ್ಮ ನೆನಪು ಮಗಳ ಜತೆಗೆ ಯಾವಾಗಲೂ ಹಸಿರಾಗಿರಲಿ ಅಂತ ಬಂಗಾರದ ಬಳೆ ಗಿಫ್ಟ್ ಕೊಟ್ಟಿದ್ದರು. ಆದ್ರೇ, ತಂದೆಯ ನೆನಪಿಗಿಂತಲೂ ಹುತಾತ್ಮ ಯೋಧರ ಪತ್ನಿಯರ ಕಣ್ಣೀರು ತಾನೂ ಮಹಿಳೆಯಾದ ಪ್ರಿನ್ಸಿಪಾಲರಿಗೆ ಇನ್ನಿಲ್ಲದಂತೆ ಕಾಡಿದೆ. ಅಪ್ಪನ ನೆನಪಿಗಿಂತಲೂ ದೇಶದ ಸೈನಿಕರ ಕುಟುಂಬಗಳ ತ್ಯಾಗವೇ ದೊಡ್ಡದು ಅಂತ ಕಿರಣ್ ಜಾಗವಾಲ್‌ರಿಗೆ ಅನಿಸಿದೆ.