ನವದೆಹಲಿ:ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಶಾಮೀಲಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಇಡಿ ದಾಖಲಿಸಿದ್ದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವ ವೇಳೆ ಸರ್ವೋಚ್ಛ ನ್ಯಾಯಾಲಯ ಕೆಲ ಷರತ್ತುಗಳನ್ನು ವಿಧಿಸಿದೆ. ಚಿದಂಬರಂ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಮೇಲೂ ಪ್ರಭಾವ ಬೀರುವಂತಿಲ್ಲ ಮತ್ತು ಯಾವುದೇ ಸುದ್ದಿಗೋಷ್ಠಿ ಅಥವಾ ಸಂದರ್ಶನ ನೀಡುವಂತಿಲ್ಲ ಎಂದು ತ್ರಿಸದಸ್ಯ ಪೀಠ ಸೂಚಿಸಿದೆ.
ಜಾಮೀನು ಪಡೆಯುವ ವೇಳೆ ಚಿದಂಬರಂ ಅವರು ಎರಡು ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ಕೋರ್ಟ್ ಅನುಮತಿ ಇಲ್ಲದೆ ಚಿದಂಬರಂ ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ಜಾಮೀನು ಆದೇಶದಲ್ಲಿ ಹೇಳಲಾಗಿದೆ.
ಜಸ್ಟೀಸ್ ಆರ್.ಭಾನುಮತಿ ನೇತೃತ್ವ ತ್ರಿಸದಸ್ಯ ಪೀಠ ಕಾಂಗ್ರೆಸ್ ನಾಯಕನ ಜಾಮೀನು ಅರ್ಜಿಯ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ನ.15ರಂದು ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಮೆಟ್ಟಿಲೇರಿದ್ದರು.
74 ವರ್ಷದ ಚಿದಂಬರಂ ಅವರಿಗೆ ಜಾಮೀನು ನೀಡಿದಲ್ಲಿ ಸಾಕ್ಷಿದಾರರಿಗೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ(ಇಡಿ) ತನ್ನ ವಾದ ಮಂಡಿಸಿತ್ತು. ಆದರೆ ತನಿಖಾ ಸಂಸ್ಥೆ ನನ್ನ ವೈಯಕ್ತಿಕ ಘನತೆಗೆ ಕುಂದು ತರುವಂತಿಲ್ಲ ಎಂದು ಚಿದಂಬರಂ ಪ್ರತಿವಾದ ಮಂಡಿಸಿದ್ದರು.
ಇಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಂತಹ ಆರ್ಥಿಕ ಅಪರಾಧಗಳು ದೇಶದ ಆರ್ಥಿಕತೆ ಪೆಟ್ಟು ನೀಡುವುದು ಮಾತ್ರವಲ್ಲದೆ ವ್ಯವಸ್ಥೆ ಮೇಲಿನ ಜನರ ನಂಬಿಕೆಗಳೂ ನಶಿಸುವಂತೆ ಮಾಡುತ್ತದೆ ಎಂದು ಕೋರ್ಟ್ ಮುಂದೆ ಹೇಳಿದ್ದರು.
ಚಿದಂಬರಂ ಪರ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನುಸಿಂಘ್ವಿ, ಹಗರಣದ ಸಾಕ್ಷಿದಾರರ ಮೇಲೆ ತಮ್ಮ ಕಕ್ಷಿದಾರ(ಚಿದಂಬರಂ) ಪ್ರಭಾವ ಬೀರಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷ್ಯ ಇದೆ ಎಂದು ಪ್ರಶ್ನೆ ಮಾಡಿದ್ದರು.
ಪಿ.ಚಿದಂಬರಂ ಅವರನ್ನು ಆ.12ರಂದು ಸಿಬಿಐ ರಾತ್ರೋರಾತ್ರಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಅ.22ರಂದು ಜಾಮೀನು ದೊರೆತಿತ್ತು. ಆದರೆ ಅ.16ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸತತ ಎರಡು ಗಂಟೆ ವಿಚಾರಣೆ ನಡೆಸಿ ಬಂಧಿಸಿತ್ತು.