ನವದೆಹಲಿ:ಶತಮಾನದಷ್ಟು ಹಳೆಯದಾದ ಐತಿಹಾಸಿಕ ಅಯೋಧ್ಯೆ ತೀರ್ಪು ಹೊರಬಿದ್ದ ಬೆನ್ನಲ್ಲೇ ಇಂದು ಸುಪ್ರೀಂಕೋರ್ಟ್ ಮತ್ತೆರಡು ಮಹತ್ವದ ಪ್ರಕರಣಗಳ ಕುರಿತು ತನ್ನ ತೀರ್ಪು ಪ್ರಕಟಿಸಲಿದ್ದು, ಇಡೀ ದೇಶದ ಚಿತ್ತವೇ ಸುಪ್ರೀಂನತ್ತ ನೆಟ್ಟಿದೆ.
ಫ್ರಾನ್ಸ್ನ ಡೆಸಾಲ್ಟ್ ಏವಿಯೇಷನ್‌ನೊಂದಿಗಿನ ರಫೇಲ್ ಫೈಟರ್ ಜೆಟ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೀಡಿದ ಕ್ಲೀನ್ ಚಿಟ್ ತೀರ್ಪ ಅನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಲಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಫ್ರಾನ್ಸ್ ಜೊತೆಗೆ ಮಾಡಿಕೊಳ್ಳಲಾದ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿದ್ದವು. ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ಕ್ಲಿನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಮಾಜಿ ಕೇಂದ್ರ ಸಚಿವರಾದ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಸಾಮಾಜಿಕ ಕಾರ್ಯಕರ್ತ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ತೀರ್ಪು ಮರು ಪರಿಶೀಲನಾ ಅರ್ಜಿಗಳ ವಿಚಾರಣೆಯ ತೀರ್ಪು ಇಂದು ಹೊರಬೀಳಲಿದೆ.
ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ತೀರ್ಪು ಇಂದು ಪ್ರಕಟ:
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಕಳೆದ ವರ್ಷ ಸಿಜೆಐ ದೀಪಕ್ ಮಿಶ್ರ ಅವರ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ಈ ತೀರ್ಪಿನ ಬಗ್ಗೆ ದೇಶಾದ್ಯಂತ ಭಾರಿ ಚರ್ಚೆಯಾಗಿ ಪರ-ವಿರೋಧದ ಮಾತುಗಳು ಕೇಳಿಬಂದಿದ್ದವು. ತೀರ್ಪಿನ ಮರು ಪರಿಶೀಲನೆ ಮಾಡಬೇಕೆಂದು ಬಂದಿರುವ ಅರ್ಜಿಗಳ ವಿಚಾರಣೆಯ ಕುರಿತು ಇಂದು ತೀರ್ಪು ಪ್ರಕಟವಾಗಲಿದೆ.