ನವದೆಹಲಿ:ನಗರ, ಪಟ್ಟಣಗಳ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಕೊರೊನಾ ಪರೀಕ್ಷಿಸುವ ಸೌಲಭ್ಯ ಹಾಗೂ ರಕ್ಷಣಾತ್ಮಕ ವಸ್ತುಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ದೇಶಾದ್ಯಂತ ಇರುವ ಲಕ್ಷಾಂತರ ಪೌರಕಾರ್ಮಿಕರಿಗೆ 48 ಗಂಟೆಯೊಳಗಾಗಿ ವೈಯಕ್ತಿಕ ರಕ್ಷಣಾ ಸಾಧನ ನೀಡುವಂತೆ ಕೋರಿ ಏಪ್ರಿಲ್ 9ರಂದು ದೆಹಲಿಯ ಸಾಮಾಜಿಕ ಕಾರ್ಯಕರ್ತ ಹರ್ನಮ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಷ್ಟೇ ಅಲ್ಲದೆ ಈ ಕಾರ್ಮಿಕರ ಕುಟುಂಬದ ಹಿತದೃಷ್ಟಿಯಿಂದ 48 ಗಂಟೆಗಳ ಒಳಗಾಗಿ ಕೊರೊನಾ ಪರೀಕ್ಷಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಅರ್ಜಿಯನ್ನು ತಿರಸ್ಕರಿಸಿದ್ದು, ಅರ್ಜಿದಾರರಿಗೆ ಈ ಬಗ್ಗೆ ಅಸಮಾಧಾನವಿದ್ದರೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಂತೆ ತಿಳಿಸಿದೆ.
ಇನ್ನು ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಮೆಹಮೂದ್ ಪ್ರಾಚಾರ್ಯ, ಕರ್ತವ್ಯ ನಿರ್ವಹಿಸುವ ವೇಳೆ ಪೌರ ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ಸಹಾಯಗುವಂತೆ ಪ್ರತ್ಯೇಕ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಯಾವುದೇ ಮುಂಜಾಗೃತ ಕ್ರಮವಾಗಲಿ, ಸೌಲಭ್ಯವಾಗಲಿ ಅಥವಾ ನಿಯಮವನ್ನಾಗಲಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.