ನವದೆಹಲಿ:ಮಹಾರಾಷ್ಟ್ರದಲ್ಲಿ ಇದೀಗ ಉದ್ಭವವಾಗಿರುವ ದಿಢೀರ್ ರಾಜಕೀಯ ಬೆಳವಣಿಗೆ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಕಾಂಗ್ರೆಸ್,ಶಿವಸೇನೆ ಹಾಗೂ ಎನ್ಸಿಪಿ ನಿದ್ದೆ ಹಾಳು ಮಾಡಿದೆ. ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಎನ್ಸಿಪಿ ಅಜಿತ್ ಪವಾರ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕ್ರಮ ಖಂಡಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.
ಮಹಾರಾಷ್ಟ್ರ ಹೈಡ್ರಾಮಾ: ಶಿವಸೇನೆ,ಎನ್ಸಿಪಿ ಹಾಗೂ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ!
ಮಹಾರಾಷ್ಟ್ರದಲ್ಲಿ ನಡೆದಿರುವ ದಿಢೀರ್ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಎನ್ಸಿಪಿ,ಕಾಂಗ್ರೆಸ್ ಹಾಗೂ ಶಿವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ದೇವೇಂದ್ರ ಫಡ್ನವೀಸ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಏಕಾಏಕಿಯಾಗಿ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇದೀಗ ಎನ್ಸಿಪಿ,ಶಿವಸೇನೆ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಬೆಳಗ್ಗೆ 11:30ಕ್ಕೆ ಅವರ ವಿಚಾರಣೆ ನಡೆಯಲಿದೆ.
ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ನ್ಯಾಯಮೂರ್ತಿ ಎನ್ವಿ ರಮನ್,ಅಶೋಕ್ ಭೂಷಣ ಹಾಗೂ ಜಸ್ಟೀಸ್ ಸಂಜಯ್ ಖನ್ನಾ ನೇತೃತ್ವದ ಪೀಠ ಇದರ ವಿಚಾರಣೆ ನಡೆಸಲಿದೆ.
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲು ರಾಜ್ಯಪಾಲರ ಬಳಿ ತೆರಳುವಾಗ 114 ಶಾಸಕರ ಸಹಿಗಳಿರುವ ಪತ್ರ ತೆಗೆದುಕೊಂಡು ಹೋಗಬೇಕು ಆದರೆ ಈ ಯಾವುದೇ ಪತ್ರವಿಲ್ಲದೇ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿರುವ ಅವರು, ರಾಜ್ಯಪಾಲರು ತೀರ್ಮಾನ, ತುರ್ತಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.