ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಎಷ್ಟು ಸಮಯದವರೆಗೆ ಬಂಧನದಲ್ಲಿಡಲಾಗುವುದು ಮತ್ತು ಯಾವ ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಳೆದ ವರ್ಷದ ಆಗಸ್ಟ್‌ನಿಂದ ಮೆಹಬೂಬಾ ಮುಫ್ತಿ ಬಂಧನದಲ್ಲಿದ್ದಾರೆ. ಇದನ್ನು ಪ್ರಶ್ನಿಸಿ ಅವರ ಮಗಳು ಇಲ್ತಿಜಾ ಮುಫ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಬಹುದಾದ ಗರಿಷ್ಠ ಅವಧಿ ಎಷ್ಟು ಎಂದು ಕೇಂದ್ರವನ್ನು ಪ್ರಶ್ನಿಸಿದ್ದು, ಉತ್ತರ ನೀಡುವಂತೆ ಸೂಚಿಸಿದೆ.
ವಾದ ಮಂಡಿಸಿದ ಮುಫ್ತಿ ಪರ ವಕೀಲರು, ಕುಟುಂಬಸ್ಥರನ್ನು ಭೇಟಿಯಾಗಲು ಅನುಮತಿ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಈ ಬಗ್ಗೆ ಕೂಡ ಉತ್ತರ ನೀಡುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಆದರೆ ಪಕ್ಷದ ಸಭೆಗಳಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ಅದಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದೆ.
ತನ್ನ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಅವಕಾಶ ನೀಡಬೇಕೆಂದು ಮುಫ್ತಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ, ಜನರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿದೆ. ಈಗ ಮತ್ತೊಮ್ಮೆ ತಿದ್ದುಪಡಿ ಮಾಡಿದ ಮನವಿಗೆ ಮತ್ತೊಂದು ಅಫಿಡವಿಟ್ ಸಲ್ಲಿಸಲಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ನ್ಯಾಯಾಲಯ ಮುಂದೂಡಿದೆ.
ಕಳೆದ 7 ತಿಂಗಳ ಹಿಂದೆ ಕೂಡ ಮುಫ್ತಿ ಬಿಡುಗಡೆ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಆದರೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಕಳೆದ ಜುಲೈನಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಮುಫ್ತಿ ಅವರ ಬಂಧನವನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು.