ನವದೆಹಲಿ:ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ನಡೆಸಿದ್ದು, ಸದ್ಯ ಪ್ರಕರಣವನ್ನು ಪಂಚ ಸದಸ್ಯ ಪೀಠಕ್ಕೆ ವರ್ಗಾಯಿಸಿದೆ.
370ನೇ ವಿಧಿ ರದ್ದತಿ ಪ್ರಶ್ನಿಸಿ ಹತ್ತಕ್ಕೂ ಅರ್ಜಿಗಳು ಸುಪ್ರೀಂನಲ್ಲಿ ಸಲ್ಲಿಕೆಯಾಗಿತ್ತು.ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಇದೀಗ ಪ್ರಕರಣದ ಗಂಭೀರತೆ ಅರಿತು ಪಂಚಸದಸ್ಯ ಪೀಠಕ್ಕೆ ವರ್ಗಾಯಿಸಿದೆ.
ಪಂಚಸದಸ್ಯ ಪೀಠ ಈ ಅರ್ಜಿಗಳನ್ನು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ವಿಚಾರಣೆ ನಡೆಸಲಿದೆ. ಇಂದಿನ ವಿಚಾರಣೆಯ ಬಳಿಕ ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಆಡಳಿತ ವರ್ಗಕ್ಕೆ ನೋಟಿಸ್ ರವಾನೆ ಮಾಡಿದೆ.
ಇಂದಿನ ಸುಪ್ರೀಂ ವಿಚಾರಣೆ ಬಗ್ಗೆ ಹಿರಿಯ ವಕೀಲ ಎಂ.ಎಲ್.ಶರ್ಮ ಮಾತು ಕಾಶ್ಮೀರ್ ಟೈಮ್ಸ್ ಸಂಪಾದಕಿ ಅನುರಾಧ ಭಸಿನ್, ಕಣಿವೆ ರಾಜ್ಯದಲ್ಲಿ ಇಂಟರ್ನೆಟ್, ಲ್ಯಾಂಡ್ಲೈನ್ ಸೇರಿದಂತೆ ಸಂವಹನ ಮಾಧ್ಯಮಗಳನ್ನು ಸಕ್ರಿಯಗೊಳಿಸುವಂತೆ ಕೋರ್ಟ್ ಮುಂದೆ ಮನವಿ ಮಾಡಿದ್ದರು. ಇದೇ ವಿಚಾರಕ್ಕೆ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನದ ಒಳಗಾಗಿ ಸಂಪೂರ್ಣ ವರದಿಯನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ ಮೊಹಮ್ಮದ್ ಅಲೀಂ ಸೈಯದ್ ಎನ್ನುವವರು ಅನಂತ್ನಾಗ್ ಜಿಲ್ಲೆಯಲ್ಲಿರುವ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದಾರೆ, ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಜಮ್ಮು ಕಾಶ್ಮೀರ ಪೊಲೀಸರಿಗೆ ಸೂಚಿಸಿದ್ದಾರೆ.
ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರಿಗೆ ಕಣಿವೆ ರಾಜ್ಯಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಮಾಜಿ ಶಾಸಕ ಯೂಸುಫ್ ತರಿಗಾಮಿ ಅವರ ಭೇಟಿಗೆ ಯೆಚೂರಿ ಕೋರ್ಟ್ ಅನುಮತಿ ಕೇಳಿದ್ದರು. ನೀವು ಪಕ್ಷದ ಪ್ರಧಾನ ಕಾರ್ಯದರ್ಶಿ, ಪಕ್ಷದ ಕೆಲಸಕ್ಕೆ ಮಾತ್ರ ತೆರಳ ಬಹುದೇ ವಿನಃ ಬೇರೆ ಕಾರ್ಯ ಮಾಡುವಂತಿಲ್ಲ ಎಂದು ಇದೇ ವೇಳೆ, ಸುಪ್ರೀಂಕೋರ್ಟ್ ಸೂಚನೆ ಸಹ ಕೊಟ್ಟಿತು.