ನವದೆಹಲಿ: ವಿವಾಹಿತ ದಂಪತಿಗಳ ವೈಯಕ್ತಿಕ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಾಗುವಂತೆ ಅನುಮತಿಸುವ ನಿಬಂಧನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ವಿಶೇಷ ವಿವಾಹ ಕಾಯ್ದೆಯ ಕೆಲವು ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿದ್ದ ಮನವಿಯೊಂದಕ್ಕೆ ಕೋರ್ಟ್ ಬುಧವಾರ ಪ್ರತಿಕ್ರಿಯೆ ನೀಡುವಂತೆ ಕೇಂದ್ರವನ್ನು ಕೋರಿದೆ. ಇಬ್ಬರು ವಯಸ್ಕರು ತಮ್ಮ ವಿವಾಹದ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಅನುಮತಿಸುವ 1954ರ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಆಗಿತ್ತು. ಮದುವೆ ಮತ್ತು ಗೌಪ್ಯತೆಯ ಮೂಲಭೂತ ಹಕ್ಕಾಗಿದೆ ಎಂದು ಅರ್ಜಿದಾರರು ಹೇಳಿದ್ದರು.
ಕೇರಳ ಮೂಲದ ಕಾನೂನು ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಕೇಂದ್ರಕ್ಕೆ ನೋಟಿಸ್ ನೀಡಿದೆ.