ನವದೆಹಲಿ:ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಲೋಕಸಭೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ತೆರವುಗೊಂಡಿರುವ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಸುವುದು ಕಾನೂನು ಉಲ್ಲಂಘನೆ ಮತ್ತು ಚುನಾವಣೆಯನ್ನು ತಡೆಹಿಡಿಯಬೇಕು ಎಂದು ಅಮ್ರೇಲಿಯ ಕಾಂಗ್ರೆಸ್ ಶಾಸಕ ಹಾಗೂ ಗುಜರಾತ್ ವಿಧಾನಸಭೆ ವಿಪಕ್ಷ ನಾಯಕ ಪರೇಶ್ಭಾಯಿ ಧನಾನಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಗಾಂಧಿನಗರ ಕ್ಷೇತ್ರದಿಂದ ಅಮಿತ್ ಶಾ ಹಾಗೂ ಅಮೇಠಿ ಕ್ಷೇತ್ರದಿಂದ ಸ್ಮೃತಿ ಇರಾನಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶ ಮಾಡಿದ್ದಾರೆ. ಹೀಗಾಗಿ ಗುಜರಾತ್ನಲ್ಲಿ ರಾಜ್ಯಸಭೆಯ ಎರಡು ಸ್ಥಾನ ತೆರವುಗೊಂಡಿತ್ತು. ಈ ಎರಡು ಸ್ಥಾನಗಳಿಗೆ ಆಯೋಗ ಪ್ರತ್ಯೇಕ ಚುನಾವಣೆ ಘೋಷಣೆ ಮಾಡಿದೆ.
ಎರಡು ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದರೆ ಒಂದು ಸ್ಥಾನ ಗೆಲ್ಲಬಹುದು ಎಂದು ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಇದೇ ಕಾರಣಕ್ಕೆ ಸುಪ್ರೀಂ ಮೊರೆ ಹೋಗಿತ್ತು.
ಸದ್ಯ ಅರ್ಜಿ ವಜಾ ಮಾಡಿರುವ ಸರ್ವೋಚ್ಛ ನ್ಯಾಯಾಲಯ, ಆಯೋಗದ ನಿರ್ಧಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ಹೇಳಿದೆ. ಚುನಾವಣೆಯ ಅಧಿಸೂಚನೆಯನ್ನು ಆಯೋಗ ಹೊರಡಿಸಿದ್ದು, ಇಂತಹ ಸಂದರ್ಭದಲ್ಲಿ ಕೋರ್ಟ್ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಮತ್ತು ಪ್ರತ್ಯೇಕ ಚುನಾವಣೆ ನಡೆಸುವುದು ಕಾನೂನು ಉಲ್ಲಂಘನೆಯಲ್ಲ ಎಂದು ಅರ್ಜಿದಾರರಿಗೆ ಹೇಳಿದೆ.
ಇದರ ನಡುವೆ ಬಿಜೆಪಿಯಿಂದ ಎಸ್.ಜೈಶಂಕರ್ ಹಾಗೂ ಜುಗಲ್ಜಿ ಮಥುರ್ಜಿ ಠಾಕೂರ್ ರಾಜ್ಯಸಭಾ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದ್ದಾರೆ.