ನವದೆಹಲಿ: ತಬ್ಲಿಘಿ ಜಮಾತ್ ಸಮಾವೇಶದ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಆದೇಶ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ಕೆಲ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಬ್ಲಿಘಿ ಜಮಾತ್ ಸಮಾವೇಶ ಕುರಿತು ಸುಳ್ಳು ಸುದ್ದಿ ಹಾಗೂ ಕೋಮು ಪ್ರಚೋದನಕಾರಿ ವರದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ, ಇಂಥ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಜಮಿಯತ್ ಉಲೇಮಾ-ಎ-ಹಿಂದ್ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡಲಾಗದು. ಮುಂದಿನ ವಾರ ಈ ಕುರಿತು ವಿಸ್ತೃತ ವಿಚಾರಣೆ ನಡೆಸಲಾಗುವುದು. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರಸಾರ ತಡೆಗೆ ದೂರಗಾಮಿ ಪರಿಣಾಮ ಬೀರುವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.