ನವದೆಹಲಿ:ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಸುಪ್ರೀಂಕೋರ್ಟ್, ರಾಜ್ಯದ ಕೆಲವು ಭಾಗಗಳಲ್ಲಿ ಗಣಿಗಾರಿಕೆ ಪುನರ್ ಆರಂಭಿಸಲು ಪರವಾನಗಿ ನೀಡುವ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧರಿಸಲಿ ಎಂದು ಮಾರ್ಚ್ 16ರ ವರೆಗೆ ಕಾಲಾವಕಾಶ ನೀಡಿದೆ.
ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ತಕ್ಷಣದ ಲಾಭದ ಆಸೆಗಾಗಿ ಬೆರಳೆಣಿಕೆಯಷ್ಟು ಅವಕಾಶವಾದಿಗಳು ನೈಸರ್ಗಿಕ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆ ನಡೆಸುತ್ತಿದೆ. ವಿಶೇಷವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅತಿಯಾದ ಶೋಷಣೆ, ಅತಿರೇಕದ ಗಣಿಗಾರಿಕೆ ನಡೆಯುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸಂಬಂಧಪಟ್ಟ ಭೂಮಿ ಅರಣ್ಯ ಅಥವಾ ಕಂದಾಯ ಭೂಮಿಯೇ ಎಂದು ಕಂಡುಹಿಡಿಯಲು ಸಿಇಸಿ ವಿಫಲವಾಗಿದೆಯೇ ಎಂದು ನ್ಯಾಯಾಲಯ ಮೌಲ್ಯಮಾಪನ ನಡೆಸಿದೆ.
ಹಿರಿಯ ವಕೀಲ ದುಶ್ಯನ್ ದೇವ್ 2009 ರಿಂದ ಗುತ್ತಿಗೆಯನ್ನು ನವೀಕರಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಹಾಗಾದರೆ ರಾಜ್ಯದ ಆಡಳಿತಶಾಹಿ ವಿಫಲವಾಗಿದೆಯೇ ಎಂದು ನ್ಯಾಯಮೂರ್ತಿ ರಮಣ ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ವಕೀಲರು ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದರು. ಅಧಿಕಾರಶಾಹಿ ಏನನ್ನೂ ಮಾಡದಿರುವುದರಿಂದ ಎಲ್ಲವನ್ನೂ ನ್ಯಾಯಾಲಯಕ್ಕೆ ರವಾನಿಸಲು ಅವಕಾಶವಿದೆಯೇ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ.
ಗಣಿಗಾರಿಕೆ ಪರವಾನಗಿಗಳ ಬಗ್ಗೆ ಕರ್ನಾಟಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುವಂತೆ ಕೋರಿ ನ್ಯಾಯಾಲಯ ಈ ವಿಷಯವನ್ನು ಮುಂದೂಡಿದೆ.