ನವದೆಹಲಿ: ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ವೈವಿಧ್ಯತೆಯ ಕೊರೆತೆ ಇದೆ ಎಂದು ರಾಜ್ಯಸಭೆಯಲ್ಲಿ ಸಂಸದ ಪಿ.ವಿಲ್ಸನ್ ಹೇಳಿದರು.
ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಪಿ.ವಿಲ್ಸನ್, ಸುಪ್ರೀಂಕೋರ್ಟ್‌ಗೆ ಜಡ್ಜ್‌ಗಳನ್ನು ನೇಮಕ ಮಾಡಿಕೊಳ್ಳಲು ವೈವಿಧ್ಯತೆಯನ್ನು ಪ್ರದರ್ಶಿಸುತ್ತಿಲ್ಲ. ಕೇವಲ ಕೆಲವೇ ಸಮುದಾಯದವರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಮೇಲ್ಮನೆಯಲ್ಲಿಂದು ಆರೋಪಿಸಿದರು.
ಕಳೆದ ಕೆಲ ವರ್ಷಗಳಿಂದ ಕೋರ್ಟ್‌ನಲ್ಲಿ ಗೊಂದಲದ ಪ್ರವೃತ್ತಿಗಳು ಎದ್ದು ಕಾಣುತ್ತಿವೆ. ಹೀಗಾಗಿ ಕ್ಷೀಣಿಸುತ್ತಿರುವ ದೇಶದ ಎಲ್ಲಾ ಸಮುದಾಯಗಳ ಪ್ರತಿನಿಧಿಗಳನ್ನು ಸುಪ್ರೀಂಕೋರ್ಟ್‌ಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ವೈವಿಧ್ಯತೆಯ ಕೊರತೆಯಿದೆ. ಬಹುತ್ವ ಸಮಾಜ ಮತ್ತು ಅದ್ಭುತವಾದ ವೈವಿಧ್ಯತೆಯನ್ನು ಪ್ರದರ್ಶಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ಕೋರ್ಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನ್ಯಾಯಮೂರ್ತಿಗಳು ಇಲ್ಲ. ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವ ಸಮುದಾಯದಿಂದ ನ್ಯಾಯಮೂರ್ತಿಗಳು ಬರಬೇಕಿದೆ. ಕೆಲವೇ ಸಮುದಾಯಗಳಿಂದ ಜಡ್ಜ್‌ಗಳು ಬರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದನ್ನ ತಡೆಯಲು ನ್ಯಾಯಾಲಯದಲ್ಲಿ ವೈವಿಧ್ಯತೆಯ ಅವಶ್ಯಕತೆ ಇದೆ ಎಂದು ವಿಲ್ಸನ್ ಹೇಳಿದ್ದಾರೆ.